ಆತಂಕ ಸೃಷ್ಟಿಸಿರುವ ಹೊಳೆನರಸೀಪುರ ಪಿಎಸ್‌ಐ

HUN-MAY-27-1(PRIVATE NURSING HOME CLOSED)
Published on

ಹುಣಸೂರು: ಕರೊನಾ ವೈರಸ್ ಸೋಂಕು ದೃಢಪಟ್ಟ ಹೊಳೆನರಸೀಪುರ ತಾಲೂಕಿನ ಪೊಲೀಸ್ ಅಧಿಕಾರಿಯೊಬ್ಬರ ನಿರ್ಲಕ್ಷ್ಯತನದಿಂದಾಗಿ ಹುಣಸೂರು ತಾಲೂಕಿನಲ್ಲಿ 38 ಜನರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದು ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.


ಹೊಳೆನರಸೀಪುರ ಠಾಣೆಯ ಪಿಎಸ್‌ಐ ತಾಲೂಕಿನಲ್ಲಿ ಎಡವಟ್ಟು ಮಾಡುವ ಮೂಲಕ ಜನತೆಯಲ್ಲಿ ಆತಂಕ ಸೃಷ್ಟಿಗೆ ಕಾರಣ ರಾಗಿದ್ದಾರೆ. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಂದೋಬಸ್ತ್ ಕಾರ್ಯವನ್ನು ಮುಗಿಸಿಕೊಂಡು ಮೇ 24ಕ್ಕೆ ಹೊಳೆನ ರಸೀಪುರಕ್ಕೆ ಬಂದು ಅಲ್ಲಿಂದ ಮೇ 25ರಂದು ಮೈಸೂರಿನ ವಿಜಯನಗರ 4ನೇ ಹಂತ ಬಡಾವಣೆಯ ತಮ್ಮ ಮನೆಗೆ ಕುಟುಂಬದೊಂದಿಗೆ ಬಂದಿದ್ದಾರೆ. ನಂತರ ಪೊಲೀಸ್ ಅಧಿಕಾರಿಯ ತಾಯಿ(72ವರ್ಷ)ಗೆ ಹುಷಾರಿಲ್ಲದ ಕಾರಣ ಹುಣಸೂರು ಪಟ್ಟಣದ ಬಸ್‌ನಿಲ್ದಾಣದ ಬಳಿಯಿರುವ ಖಾಸಗಿ ನರ್ಸೀಂಗ್ ಹೋಂಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಜನೌಷಧ್ ಕೇಂದ್ರದಲ್ಲಿ ಔಷಧಗಳನ್ನು ಖರೀದಿಸಿ ಮೈಸೂರಿಗೆ ವಾಪಸ್ ಆಗಿದ್ದಾರೆ.


ಮೇ 26ರಂದು ತಮ್ಮ ಕುಟುಂಬ ಸಮೇತ ಪಿಎಸ್‌ಐ ತಾಯಿಯವರ ತವರೂರಾದ ಮರದೂರು ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಸಂಬಂಧಿಗಳ ಬೀಗರ ಔತಣದಲ್ಲಿ ಭಾಗವಹಿಸಿ ಎಲ್ಲರೂ ಊಟಮಾಡಿಕೊಂಡು ಹೊಸೂರು ಗ್ರಾಮದ ಪಕ್ಕದಲ್ಲಿರುವ ಕಾಳೇಗೌಡನಕೊಪ್ಪಲು ಗ್ರಾಮದಲ್ಲಿ ನೆಂಟರನ್ನು ಸಂಪರ್ಕಿಸಿ ನಂತರ ಮೈಸೂರಿಗೆ ತೆರಳಿ ಅಲ್ಲಿಂದ ಹೊಳೆನರಸೀಪುರ ತಲುಪಿದ್ದಾರೆ.


ನಿರ್ಲಕ್ಷ್ಯತನ ತಂದ ಅಪಾಯ:
ಬೆಳಗಾವಿಯಿಂದ ಬಂದ ಪಿಎಸ್‌ಐಗೆ ಅಲ್ಲಿನ ಆರೋಗ್ಯ ಇಲಾಖೆ ಗಂಟಲು ದ್ರವ ಪರೀಕ್ಷೆಗಾಗಿ ಸ್ಯಾಂಪಲ್ ಪಡೆದು ವರದಿಗಾಗಿ ಕಾಯುತ್ತಿತ್ತು. ವರದಿ ಬಂದಾಗ ಕರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಆದರೆ ಅಷ್ಟರಲ್ಲಾಗಲೇ ಪೊಲೀಸ್ ಅಧಿಕಾರಿ ತಮ್ಮ ಕುಟುಂಬ ದೊಂದಿಗೆ ಮೈಸೂರು ಕಡೆ ಬಂದಿದ್ದರು. ಮೈಸೂರಿಗೆ ಬಂದ ನಂತರವೂ ಅವರಿಗೆ ಪಾಸಿಟಿವ್ ಆಗಿರುವ ಕುರಿತು ಮಾಹಿತಿ ಸಿಗಲಿಲ್ಲವೇ ಎನ್ನುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.


38 ಜನ ಪ್ರಾಥಮಿಕ ಸಂಪರ್ಕ:
ಪಿಎಸ್‌ಐ ಮತ್ತವರ ಕುಟುಂಬ ಪಟ್ಟಣ ವ್ಯಾಪ್ತಿಯಲ್ಲಿ 8 ಮಂದಿ ಮತ್ತು ಎರಡೂ ಗ್ರಾಮಗಳ ಒಟ್ಟು 30 ಮಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಂದು ತಿಳಿದುಬಂದಿದೆ. ಪ್ರಾಥಮಿಕ ಸಂಪರ್ಕ ಹೊಂದಿದ ಎಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.


ನರ್ಸಿಂಗ್ ಹೋಂ ಬಂದ್:
ಪಿಎಸ್‌ಐ ತಾಯಿಯವರು ಚಿಕಿತ್ಸೆ ಪಡೆದ ಖಾಸಗಿ ನರ್ಸಿಂಗ್ ಹೋಂ ಅನ್ನು ತಾಲೂಕು ಆಡಳಿತ ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದು ನರ್ಸಿಂಗ್ ಹೋಂನಲ್ಲಿದ್ದ ವೈದ್ಯರು ಸೇರಿ ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಎಲ್ಲರ ಗಂಟಲು ದ್ರವ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಹಸೀಲ್ದಾರ್ ಐ.ಇ.ಬಸವರಾಜ ತಿಳಿಸಿದ್ದಾರೆ.


ನಾಗರಿಕರಲ್ಲಿ ತಂದ ಆತಂಕ:
ಪಿಎಸ್‌ಐ ಪ್ರಕರಣ ಕ್ಷಣಮಾತ್ರದಲ್ಲಿ ಇಡೀ ತಾಲೂಕನ್ನು ಹಬ್ಬಿತು. ಹುಣಸೂರಿನಲ್ಲಿ ಕರೊನಾ ಪಾಸಿಟಿವ್ ಅಂತೆ, ಇಬ್ಬರಂತೆ, ಸೀಲ್ ಡೌನ್ ಅಂತೆ ಎಂಬಿತ್ಯಾದಿ ಅಂತೆ ಕಂತೆಗಳು ಒಬ್ಬರಿಂದೊಬ್ಬರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಹಬ್ಬಲು ಆರಂಭಿಸಿತು. ಕೆಲವರಂತೂ ಆಸ್ಪತ್ರೆ ಪಕ್ಕದ ಗ್ರಾಮಾಂತರ ಪೊಲೀಸ್ ಠಾಣೆಯನ್ನೂ ಸೀಲ್ ಮಾಡಿದ್ದಾರೆ ಎನ್ನುವವರೆಗೆ ಗುಲ್ಲು ಹಬ್ಬಿಸಿದರು. ನಂತರ
ನಿಧಾನವಾಗಿ ಸತ್ಯ ತಿಳಿದ ನಂತರ ನಾಗರಿಕರು ನಿಟ್ಟುಸಿರು ಬಿಟ್ಟರು.


ಸೀಲ್‌ಡೌನ್ ಇಲ್ಲ:
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಐ.ಇ.ಬಸವರಾಜ, ಹೊಳೆನರಸೀಪುರ ಪಿಎಸ್‌ಐ ವಿಷಯಕ್ಕೆ ಸಂಬಂಧಿಸಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಯಾವ ರಸ್ತೆಯಾಗಲಿ, ಬಡಾವಣೆಯಾಗಲಿ ಸೀಲ್‌ಡೌನ್ ಮಾಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಯನ್ನು ಬಂದ್ ಮಾಡಲಾಗಿದ್ದು, ಗಂಟಲು ದ್ರವ ಪರೀಕ್ಷೆ ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರ ಗಂಟಲು ದ್ರವ ಪರೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಸುಳ್ಳುಸುದ್ದಿಗೆ ಕಿವಿಗೊಡಬಾರದು. ಕಾರಣವಿಲ್ಲದೇ ಹೊರಗೆ ಓಡಾಡುವುದನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net