VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ ಮನಸೂರೆಗೊಂಡ ಆನೆ

Elephant 22 Jan 20
Published on

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ.

ಹಸಿದ ಆನೆಯೊಂದು ಮಾವುತನ ಬಟ್ಟಲಿನಿಂದ ಅನ್ನವನ್ನು ಸೊಂಡಿಲಿನಿಂದ ತೆಗೆದುಕೊಂಡು ತನ್ನ ಬಾಯಿಗೆ ಹಾಕಿಕೊಳ್ಳುವ ವಿಡಿಯೋ ಇದಾಗಿದೆ. ಇದನ್ನು ನೋಡಿದವರೆಲ್ಲ ಮಾವುತ ಹಾಗೂ ಅವನ ಆನೆಯ ಸ್ನೇಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಾವುತ ಮತ್ತೋರ್ವನ ಜತೆ ಕುಳಿತುಕೊಂಡು ಊಟ ಮಾಡುತ್ತಿರುತ್ತಾನೆ. ಆತನ ಪಕ್ಕದಲ್ಲೇ ಆನೆ ನಿಂತುಕೊಂಡು ಇರುತ್ತದೆ. ಮಾವುತ ದೊಡ್ಡದಾದ ಬಾಳೆಯಲ್ಲಿ ಅನ್ನ ಹಾಕಿಕೊಂಡು ಊಟ ಮಾಡುತ್ತಿದ್ದಾರೆ ಪಕ್ಕದಲ್ಲಿ ನಿಂತಿದ್ದ ಆನೆಯೂ ಬಂದು ಅವನ ಎಲೆಗೆ ಸೊಂಡಿಲು ಹಾಕುತ್ತದೆ. ಬಳಿಕ ತುತ್ತು ತೆಗೆದುಕೊಂಡು ತನ್ನ ಬಾಯಿಗೆ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಕೇರಳದಲ್ಲಿ ಚಿತ್ರೀಕರಿಸಲಾಗಿದೆ.

ಶನಿವಾರ ( 18-01-2020) ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗಿದ್ದು ಇದುವರೆಗೆ 4.5 ಲಕ್ಷ ಬಾರಿ ವೀಕ್ಷಣೆಯಾಗಿದೆ.

ಇವರಿಬ್ಬರು ಅತ್ಯುತ್ತಮ ಸ್ನೇಹಿತರು. ಈ ಒಳ್ಳೆಯ ಗೆಳೆಯರ ಮಧ್ಯ ಯಾವುದೇ ಜಾತಿ, ಧರ್ಮದ ಅಡ್ಡಗೋಡೆಯಿಲ್ಲ ಎಂದು ಓರ್ವರು ಕಾಮೆಂಟ್ ಬರೆದಿದ್ದರೆ, ಈ ವಿಡಿಯೋ ನೋಡಿ ನನ್ನ ಕಣ್ಣು ತುಂಬಿ ಬಂತು ಎಂದು ಮತ್ತೋರ್ವರು ಹೇಳಿದ್ದಾರೆ. ಹಾಗೇ ಆನೆ ಮಾವುತ ಊಟದ ಎಲೆಯಿಂದ ಚಿಕ್ಕ ತುತ್ತನ್ನು ಮಾತ್ರ ತೆಗೆದುಕೊಂಡಿದೆ, ಅದಕ್ಕೆಷ್ಟು ಬುದ್ಧಿ ಇದೆ ಎಂದೂ ಕೂಡ ನೆಟ್ಟಿಗರೋರ್ವರು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net