

ರಾಣೆಬೆನ್ನೂರ: ತಾಲೂಕಿನ ಹುಲ್ಲತ್ತಿ ಗ್ರಾಮಕ್ಕೆ ಗುತ್ತಲ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ನೂತನ ರಸ್ತೆ ನಿಮಾರ್ಣ ಕಾಮಗಾರಿಗಾಗಿ ಬುಧವಾರ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ರಾಣೆಬೆನ್ನೂರ ನಗರ ಪ್ರದೇಶದಿಂದ ಹುಲ್ಲತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆಯು ಮಳೆಗಾಲದಲ್ಲಿ ಸಾರ್ವಜನಿಕ ಸಂಚಾರಕ್ಕೆ ಸೂಕ್ತವಲ್ಲ. ಸದರಿ ರಸ್ತೆ ಮೇಲೆ ರಭಸವಾಗಿ ಎರಡು ಅಡಿ ಎತ್ತರ ನೀರು ಹರಿದು ಸಂಚಾರ ಬಂದ್ ಆಗುತ್ತಿದೆ. ಇದರಿಂದ ಗ್ರಾಮಸ್ಥರು ನಗರಕ್ಕೆ ತೆರಳಲು ಅನೇಕ ರೀತಿಯ ಸಮಸ್ಯೆ ಎದುರಿಸಬೇಕಾಗಿತ್ತು. ಶಾಲಾ ಮಕ್ಕಳಿಗೆ ಹೊರತುಪಡಿಸಿ ಉಳಿದ ಸಮಯದಲ್ಲಿ ಬಸ್ ಸಂಚಾರ ವ್ಯವಸ್ಥೆ ಇರಲಿಲ್ಲ. ಬಸ್ ಸೌಕರ್ಯವಿಲ್ಲದೆ ಗ್ರಾಮಸ್ಥರು ಅನೇಕ ಸಮಸ್ಯೆ ಎದುರಿಸುವಂತಾಗಿತ್ತು. ಅದಕ್ಕಾಗಿ ಗುತ್ತಲ ಮುಖ್ಯ ರಸ್ತೆಯಿಂದ ಹುಲ್ಲತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆ ನಿಮಿರ್ಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ರಸ್ತೆ ನಿಮಾರ್ಣಕ್ಕೆ ಅವಶ್ಯಕತೆ ಇರುವ ಭೂಮಿಯ ಸ್ವಾಧಿನಕ್ಕಾಗಿ ಸರ್ವೇ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸರ್ವೇ ಕಾರ್ಯ ಕೈಗೊಂಡಿತು.
ಆರ್ಡಿಪಿಆರ್ ಇಲಾಖೆಯ ಹನುಮಂತಪ್ಪ ದೊಡ್ಮನಿ, ಕಂದಾಯ ಇಲಾಖೆಯ ನಿರೀಕ್ಷಕ ಅಶೋಕ ಅರಳೇಶ್ವರ, ಭೂ ಮಾಪಕ ಬಿ.ಆರ್. ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಐಶ್ವರ್ಯ ಎಚ್., ಪಿಡಿಒ ಟಿ.ಬಿ. ಮೂಗನವರ ಹಾಗೂ ಗ್ರಾಮಸ್ಥರು ಇದ್ದರು.