

ಗಂಧನಹಳ್ಳಿ: ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಗ್ರಾಮದೇವತೆ ಶ್ರೀ ಹುಣಸಮ್ಮ ತಾಯಿ ದೇವರ ಸಿಡಿ ಉತ್ಸವ ಮಾ.7 ಮತ್ತು 8 ರಂದು ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಅಂಗವಾಗಿ ದೇವಸ್ಥಾನ, ಮಿರ್ಲೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ದೀಪಾಲಂಕಾರ ಸೇರಿದಂತೆ ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗಿದೆ.
ಮಾ.7ರಂದು ಹುಣಸಮ್ಮ ತಾಯಿ ರಥೋತ್ಸವದ ಹಿನ್ನೆಲೆಯಲ್ಲಿ ತವರಿಗೆ ಆಗಮಿಸುವ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ತೆರಳಿ ದೇವರಿಗೆ ಮಡಿಲು ತುಂಬಿಸುವ ಶಾಸ್ತ್ರ, ತಂಬಿಟ್ಟಿನ ಆರತಿ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೇ ದೇವರಿಗೆ ವಿವಿಧ ರೀತಿಯ ಆರತಿಗಳನ್ನು ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
ಮಾ.8 ರಂದು ಮಿರ್ಲೆ, ಶಾಬಾಳು, ನಾಟಕ ಹಳ್ಳಿ, ಹಳೆಮಿರ್ಲೆ, ಕೋಡಿಯಾಲ, ಹನುಮನಹಳ್ಳಿ, ಬೀಚನಹಳ್ಳಿ, ನರಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಮಾಡಲಾಯಕನಹಳ್ಳಿ, ಮಾಳನಾಯಕನಹಳ್ಳಿ, ಕೊಪ್ಲು ಗ್ರಾಮಗಳಿಂದ ಐದು ಸಿಡಿಗಳು ಮತ್ತು ನಾಲ್ಕು ರಥಗಳು ಆಗಮಿಸಲಿದ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಿರ್ಲೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ.
ಜಾತ್ರಾ ಮಹೋತ್ಸವ ಮುಗಿದ ನಂತರ ಗ್ರಾಮದ ದೇವಸ್ಥಾನದ ಮುಂಭಾಗ ಇರುವ ಉಯ್ಯಲೆಯಲ್ಲಿ ಹುಣಸಮ್ಮ ತಾಯಿ ಆಟವಾಡುತ್ತಾಳೆ ಎಂಬ ನಂಬಿಕೆಯಿಂದ ರಾತ್ರಿ 8 ಯ ನಂತರ ದೇವಸ್ಥಾನದ ಕಡೆಗೆ ಯಾರು ಹೋಗುವುದಿಲ.್ಲ ಇದು ಇಂದಿನಿಂದಲೂ ನಡೆದುಕೊಂಡು ಬರುತ್ತಿದೆ. ರಥೋತ್ಸವ ಕಣ್ತುಂಬಿಕೊಳ್ಳಲು ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಮಗಳೂರು ಸೇರಿದಂತೆ ನಾಡಿನ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.