

ಶಿಕಾರಿಪುರ: ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಅತ್ಯಂತ ಶ್ರೇಷ್ಠವಾದುದು ಎಂದು ಪ್ರತಿಪಾದಿಸಿದವರು ಜಗದ್ಗುರು ಶ್ರೀ ರೇಣುಕಾಚಾರ್ಯರು ಎಂದು ಶಿರಸ್ತೇದಾರ್ ವಿನಯ್ ಆರಾಧ್ಯ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಜಂಗಮ ಸಮಾಜ, ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗದ್ಗುರುಗಳು ಶಕ್ತಿ ವಿಶಿಷ್ಟಾದ್ವೈತದ ಪ್ರತಿಪಾದಕರು. ತೆಲಂಗಾಣದ ಕೊಲನುಪಾಕಿಯಲ್ಲಿ ಲಿಂಗೋದ್ಭವವಾದ ಯುಗಪುರುಷರು. ಅವರ ಸ್ಮರಣೆಯಿಂದ ನಮ್ಮಲ್ಲಿರುವ ಸಂಕುಚಿತ ಭಾವನೆಗಳು ದೂರವಾಗಿ ಮನಸ್ಸು ಶುಭ್ರವಾಗಲಿದೆ ಎಂದರು.
ಜಗದಾದಿ ಜಗದ್ಗುರು ಶ್ರೀ ರೇಣುಕ ಭಗವತ್ಪಾದರು ನಾಡಿನೆಲ್ಲೆಡೆ ಸಂಚರಿಸಿ ಧಾರ್ಮಿಕ ಚಿಂತನೆಗಳು, ಸದ್ವಿಚಾರಗಳನ್ನು ಹರಡಿದವರು. ವೀರಶೈವ ಲಿಂಗಾಯತ ಧರ್ಮದ ಅತ್ಯುನ್ನತ ವಿಚಾರಗಳಿಗೆ ಅಡಿಪಾಯವಾದವರು. ಶ್ರೀ ರೇಣುಕಾಚಾರ್ಯರು ಪ್ರಾತಃಸ್ಮರಣೀಯರಾಗಿ ಧರ್ಮೋತ್ಥಾನ ಕಾರ್ಯ ಮಾಡಿದ ಮಹನೀಯರು. ಅಂಥವರ ಚರಿತೆಗಳು ಮನೆ ಮನೆಯಲ್ಲಿ ಇರಬೇಕು ಎಂದು ಹೇಳಿದರು.
ಆರ್‌ಎಫ್‌ಒ ರೇವಣಸಿದ್ದಯ್ಯ ಹಿರೇಮಠ ಮಾತನಾಡಿ, ಶ್ರೀ ರೇಣುಚಾರ್ಯರ ತಾತ್ವಿಕ ಚಿಂತನೆಗಳು, ಸಂದೇಶಗಳು ಜಗತ್ತಿನ ಗಮನಸೆಳೆದಿವೆ. ಇಂದಿಗೂ ಸರ್ವರನ್ನು ತಲುಪುವ ಸಂದೇಶವೆಂದರೆ ಅದು ವೀರಶೈವ ಲಿಂಗಾಯತ ಸಮಾಜ. ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಈ ಬಗ್ಗೆ ಸಮಾಜ ಯೋಚಿಸಬೇಕು ಎಂದು ತಿಳಿಸಿದರು.
ತಾಲೂಕು ಜಂಗಮ ಸಮಾಜದ ಉಪಾಧ್ಯಕ್ಷ ಪಟ್ಟದಯ್ಯ ಸ್ವಾಮಿ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಪುರಸಭಾ ಸದಸ್ಯ ರೇಣುಕಸ್ವಾಮಿ, ಪ್ರಭುಸ್ವಾಮಿ, ರುದ್ರಪ್ಪಯ್ಯ ಇತರರಿದ್ದರು.