

ನಮ್ಮ ಆಸೆ- ಆಕಾಂಕ್ಷೆಗಳಿಗೆ ವ್ಯಕ್ತಿಗಳನ್ನು ಸಾಧನವಾಗಿ ಬಳಸಿಕೊಳ್ಳಬಾರದು ಎಂಬ ತತ್ತ್ವವನ್ನು ಪಾಲಿಸಿದರೆ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಎಂದೂ ಕೊರತೆಯುಂಟಾಗುವುದಿಲ್ಲ. ಆದರೆ ಇತಿಹಾಸದುದ್ದಕ್ಕೂ ಧರ್ಮ, ಅಧಿಕಾರದ ಹೆಸರಿನಲ್ಲಿ ಸಮಾಜವನ್ನು ಶೋಷಿಸುತ್ತಿರುವುದನ್ನು ಕಾಣಬಹುದು. ಆದ್ದರಿಂದ ಮನುಕುಲವು ತಾನು ಕಳೆದುಕೊಂಡ ಆತ್ಮಗೌರವವನ್ನು ಮತ್ತು ಸ್ವಾತಂತ್ರ್ಯವನ್ನು ಮತ್ತೆ ಪಡೆಯುವಂತಾಯಿತು.
ಮನುಷ್ಯನು ಆತ್ಮಗೌರವದಿಂದ ಬಾಳಲು ಸಹಕಾರಿಯಾಗುವ, ಅವರಲ್ಲಿ ಅಂತರ್ಗತವಾಗಿರುವ, ಸತ್ಯ, ಜ್ಞಾನಕ್ಕಾಗಿ ಅವನು ಮಾಡುತ್ತಿರುವಹೋರಾಟಕ್ಕೆ ಪ್ರೇರಣೆ ಒದಗಿಸುವ ತಾತ್ವಿಕ ನಿಲುವೇ ಮಾನವತಾವಾದ. ಅದು ನೀತಿಶಾಸ್ತ್ರಕ್ಕೆ ಸಂಬಂಧಿಸಿದ ತಾತ್ವಿಕ ನಿಲುವು. 16ನೇ ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಪುನರುಜ್ಜೀವನದ (Renaissance ) ಸಮಯದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವ್ಯಕ್ತಿಯಾಗಿದ್ದ ಒಂದು ವಿಚಾರಧಾರೆ. ಇದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಆಂದೋಲನವೇ ಆಗಿತ್ತು. ಇಲ್ಲಿನ ಕೇಂದ್ರಬಿಂದು ಯಾವುದೇ ಸಿದ್ಧಾಂತವಾಗಿರದೇ ಮನುಷ್ಯನೇ ಆಗಿದ್ದನು. ಅವನ ಸಮಸ್ತ ಶಕ್ತಿ-ಸಾಮರ್ಥ್ಯ, ನೋವು-ನಲಿವುಗಳನ್ನು ಪ್ರಧಾನವಾಗಿಟ್ಟ್ಟುಕೊಂಡು ತನ್ನ ಭವಿಷ್ಯವನ್ನು ತಾನೇ ನಿರ್ವಿುಸುವ ಶಕ್ತಿಯುಳ್ಳವನು ಎಂಬ ಚಿಂತನಾಕ್ರಮವೇ ಮಾನವತಾವಾದವೆನಿಸಿತು.
ಕಾರ್ಲಿಸ್ ಲಾಮಂಟನ್ ಪ್ರಕಾರ ಮಾನವತಾವಾದವು ಸಾವಿರಾರು ಜನರ ಜೀವನದ ತತ್ತ್ವವಾಗಿದೆ. ಏಕೆಂದರೆ ಅದು ಜಡವಾಗದೆ, ಪ್ರತಿಯೊಬ್ಬನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ದೇಶ, ಧರ್ಮ, ಜಾತಿ, ಲಿಂಗದ ಭೇದಗಳನ್ನು ಅಳಿಸಿ ಜನರನ್ನು ಒಂದೇ ಕುಟಂಬದವರನ್ನಾಗಿ ಮಾಡಲು ಹವಣಿಸುತ್ತದೆ.