

ರಿಪ್ಪನ್‌ಪೇಟೆ: ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು ವಿರಕ್ತರು ಎಂಬ ಎರಡು ಪರಂಪರೆಗಳಿದ್ದು, ಮಾನವನ ಉದ್ಧಾರಕ್ಕೆ ರೂಪುಗೊಂಡಂತಹ ಸಮಾಜದ ಎರಡು ಕಣ್ಣುಗಳು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಕೋಣಂದೂರಿನ ಬೃಹನ್ಮಠದಲ್ಲಿ ಆಯೋಜಿಸಿದ್ದ ಗುರುವಿರಕ್ತರ ಸಮಾಗಮ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಪಂಚಾಚಾರ್ಯರು ಧರ್ಮಾಚರಣೆ ನೀತಿ ನಿಯಮಗಳನ್ನು ರೂಪಿಸಿ ಸಮಾಜವನ್ನು ಜಾಗೃತಿಗೊಳಿಸಿದರು. ವಿರಕ್ತರು ಮನುಷ್ಯನ ಅಭ್ಯುದಯದ ದಾಸೋಹ, ಶಿಕ್ಷಣ ಮತ್ತು ಕಾಯಕಕ್ಕೆ ಮಹತ್ವ ನೀಡಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಗುರುವಿರಕ್ತ ಪರಂಪರೆಯ ತತ್ವಗಳು ಮನುಷ್ಯನ ಉತ್ತಮ ಜೀವನಕ್ಕೆ ಬೇಕಾದ ಅಮೂಲ್ಯ ಸಿದ್ಧಾಂತಗಳಾಗಿವೆ. ಬದುಕಿನಲ್ಲಿ ಪಾಲಿಸಿದಾಗ ನೆಮ್ಮದಿ ದೊರಕುತ್ತದೆ. ಪ್ರಪಂಚದಲ್ಲಿ ಧಾರ್ಮಿಕ ಆಚರಣೆಗಳಿಂದ ಭಾರತವು ವಿಶಿಷ್ಟವಾಗಿ ಗುರುತಿಸಲ್ಪಡುತ್ತದೆ. ದೇಶದ ಆಚಾರ, ವಿಚಾರ, ಸಂಸ್ಕೃತಿಗಳಿಗೆ ವಿದೇಶಿಯರು ಆಕರ್ಷಿತರಾಗುತ್ತಿದ್ದು, ಅಧ್ಯಯನಕ್ಕಾಗಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇಂತಹ ಶ್ರೇಷ್ಠ ಧರ್ಮಾಚರಣೆಗಳ ಮೂಲಕ ಸಮಾಜದ ವಿವಿಧತೆಯಲ್ಲಿ ಏಕತೆ ಸಾಧಿಸಲು ಶ್ರಮಿಸಬೇಕು ಎಂದರು.
ಭಕ್ತರು ಮಠದ ಆಸ್ತಿಯಾಗಿದ್ದು, ದಾನ, ಧರ್ಮಗಳ ಮೂಲಕ ಅಸ್ತಿತ್ವ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಮಠಗಳ ಸಮಾಜಮುಖಿ ಕಾರ್ಯಕ್ಕೆ ಭಕ್ತರ ಆಶ್ರಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಧರ್ಮದ ವ್ಯಾಖ್ಯಾನ ಬೇರೆಬೇರೆ ರೀತಿ ಆಗುತ್ತಿದ್ದು, ಸಮಾಜ ದಿಕ್ಕು ತಪ್ಪುತ್ತಿರುವ ಆತಂಕವಿದೆ. ಎಲ್ಲ ಮಠಾಧೀಶರು ಇದನ್ನು ಸರಿಪಡಿಸುವ ಕೆಲಸ ನಿರ್ವಹಿಸಬೇಕು. ವೀರಶೈವ ಪಂಗಡಗಳಲ್ಲಿ ಕೆಲ ವ್ಯತ್ಯಾಸಗಳಿದ್ದು, ಇಂತಹ ಭಿನ್ನ ನಿಲುವುಗಳನ್ನು ಮರೆತು ಸಮಾಜದ ಒಳಿತಿಗೆ ಎಲ್ಲರೂ ದುಡಿಯುವ ಅಗತ್ಯವಿದೆ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆನಂದಪುರ ಮುರುಘಮಠ
ಆನಂದಪುರ ಮುರುಘರಾಜೇಂದ್ರ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕೋಣಂದೂರು ಮಠಕ್ಕೆ ಅನಾದಿಕಾಲದಲ್ಲಿಯೇ ಬೃಹನ್ಮಠ ಎಂದು ಹೆಸರು ಬಂದಿದೆ. ಆಸ್ತಿ, ಅಂತಸ್ತು, ಹಣ ಗಳಿಕೆಗೆ ಬಂದಂತಹ ಹೆಸರಲ್ಲ, ಬದಲಾಗಿ ಅಪಾರ ಭಕ್ತಸಂಪತ್ತು ಹೊಂದಿದ್ದರ ಪರಿಣಾಮ ಬೃಹನ್ಮಠ ಎನ್ನಲಾಗುತ್ತಿದೆ ಎಂದು ಹೇಳಿದರು.
ಸಮಾಜದ ಅಭ್ಯುದಯವೇ ಆಶಯ: ಗುರುವಿರಕ್ತ ಪರಂಪರೆಯ ದೃಷ್ಟಿಕೋನ ಒಂದೇ ಆಗಿದ್ದು, ಸಮಾಜದ ಅಭ್ಯುದಯ ಕರುಣಿಸುವುದಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹಿಂದಿನ ಕಾಲದಲ್ಲಿಯೂ ಕೆಲ ವ್ಯತ್ಯಾಸಗಳಿದ್ದವು. ಭಿನ್ನಾಭಿಪ್ರಾಯಗಳನ್ನು ಕುಳಿತು ಚರ್ಚಿಸಿ ಪರಿಹರಿಸಬೇಕೇ ವಿನಹಃ ಬಹಿರಂಗವಾಗಿ ಟೀಕಿಸುವುದಲ್ಲ. ಚರ್ಚೆಯು ಆರೋಗ್ಯವಂತ ಸಮಾಜದ ಭಾಗವಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಎಂದು ತಿಳಿಸಿದರು. ಬೃಹನ್ಮಠವು ಶ್ರೀಶೈಲ ಶಾಖಾ ಪೀಠ ಆಗಿದ್ದು, ಪುರಾತನ ಕಾಲದಿಂದಲೂ ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಅವರು ಹಂತ ಹಂತವಾಗಿ ಮಠದ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸದಾ ಹೀಗೆ ಮುಂದುವರೆಯಲಿ ಎಂದು ಶುಭಹಾರೈಸಿದರು.
ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕೋಣಂದೂರು ಬೃಹ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸಾಲೂರು ಮಠದ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರದೇಶಿಕೇಂದ್ರ ಸ್ವಾಮೀಜಿ, ಬಿಳಕಿ ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಹಾರನಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ತೊಗರ್ಸಿ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ, ಕ್ಯಾಸನೂರು ಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಪ್ರಮುಖರಾದ ಟಿ.ಡಿ.ಮೇಘರಾಜ್, ವೀರೇಶ ಆಲುವಳ್ಳಿ, ಕೆ.ಆರ್.ಪ್ರಕಾಶ್, ವಿನುತಾ ರವಿ, ಶಾಂತಾ ಆನಂದ, ಎಂ.ಆರ್.ಸತೀಶ್ ಇತರರಿದ್ದರು.