

ಸಾಗರ: ರಂಗಭೂಮಿ ಮುನ್ನಡೆಯಲು ಮಾನವ ಸಂಪನ್ಮೂಲವೇ ಜೀವಾಳ ಎಂದು ಹೆಗ್ಗೋಡಿನ ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.
ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ, ರಂಗಮಂಚ ಕಾಗೋಡು, ಜೋಷಿ ಫೌಂಡೇಷನ್, ಉದಯ ಕಲಾವಿದರು ಸಂಸ್ಥೆಯಿಂದ ಎನ್.ಆರ್.ಮಾಸೂರು, ಕಾಗೋಡು ಅಣ್ಣಪ್ಪ ಮತ್ತು ಯೇಸುಪ್ರಕಾಶ್ ಅವರ ಸ್ಮರಣಾರ್ಥ ಆಯೋಜಿಸಿರುವ ನೆನಪಿನ ರಂಗ ಸಂಭ್ರಮ ನಾಟಕೋತ್ಸವದದಲ್ಲಿ ರಂಗಭೂಮಿಯ ಮಹತ್ವ ಮತ್ತು ಬೆಳವಣಿಗೆ ಕುರಿತು ಮಾತನಾಡಿದರು.
ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ಇರುವ ರಂಗಭೂಮಿ ಇಂದಿಗೂ ಪ್ರಭಾವಶಾಲಿಯಾಗಿ ಉಳಿದಿರುವುದೇ ಅದರ ಶಕ್ತಿ. ರಂಗಭೂಮಿ ವಿಶೇಷ ಶಕ್ತಿ ಹೊಂದಿದ್ದು, ಇರುವ ಸಂಗತಿಗಳನ್ನು ಇದ್ದಂತೆಯೇ ತೋರಿಸುವುದು ರಂಗಭೂಮಿ ವಿಶೇಷತೆ ಎಂದು ತಿಳಿಸಿದರು.
ರಂಗಭೂಮಿ ಬಗ್ಗೆ ಎಲ್ಲ ಸರ್ಕಾರಗಳಿಗೂ ಹೆದರಿಕೆ ಇದೆ. ಅವು ಸಿನಿಮಾ ಮೇಲೆ ಸೆನ್ಸಾರ್ ಹಾಕುತ್ತವೆ. ಟಿವಿಯಲ್ಲಿ ಸ್ಪಾನ್ಸರ್ ಮಾಡುತ್ತವೆ. ಎರಡನ್ನೂ ಸರ್ಕಾರ ಕಂಟ್ರೋಲ್ ಮಾಡುತ್ತವೆ. ರಂಗಭೂಮಿ ಮೇಲೆ ಸಹ ಇವೆರಡನ್ನೂ ತರಲು ಪ್ರಯತ್ನಿಸಿವೆ. ಆದರೆ ರಂಗಭೂಮಿ ಮೇಲೆ ಇಂದಿಗೂ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ರಂಗಭೂಮಿ ಅದರ ಗುಣದ ಮೇಲೆ ನಡೆಯುತ್ತಿದೆ. ಇದು ಮಾನವ ಸಂಪನ್ಮೂಲದ ಮೇಲೆ ನಡೆಯುವುದರಿಂದ ಪ್ರಪಂಚದ ಯಾವ ಶಕ್ತಿಯೂ ರಂಗಭೂಮಿಯನ್ನು ತಡೆಯಲು ಅಸಾಧ್ಯ ಎಂದರು.
ರಂಗ ಸಾಧಕರಾದ ನಾಗೇಂದ್ರ ಎಸ್. ಕುಮಟ, ಎಸ್.ಎಸ್.ನಾಗರಾಜ್, ಮಂಜುನಾಥ ಜೇಡಿಕುಣಿ, ಉಮೇಶ್ ಹಿರೇನಲ್ಲೂರು, ನಾರಾಯಣಪ್ಪ ಕುಗ್ವೆ, ಗೀತಾ ಈಶ್ವರ್ ಅವರನ್ನು ಸನ್ಮಾನಿಸಲಾಯಿತು. ಮಧುನಿಷಾ ಮತ್ತು ಮೋನಿಷಾ ರಂಗಗೀತೆ ಹಾಡಿದರು. ನಂತರ ಸಾಗರಿಕ ಸಾಂಸ್ಕೃತಿಕ ಸೌರಭ ಸಾಗರ ತಂಡದಿಂದ ಹಡೆದ ಕೊಡಲಿಗಳು ನಾಟಕ ಪ್ರದರ್ಶನ ನಡೆಯಿತು.
ರಂಗಮಂಚ ಕಾಗೋಡು ಸಂಸ್ಥೆ ಅಧ್ಯಕ್ಷ ಬಿ.ಟಾಕಪ್ಪ, ಅಭಿನಯ ಸಾಗರ ಸಂಸ್ಥೆ ಗೌರವಾಧ್ಯಕ್ಷ ನಾರಾಯಣಮೂರ್ತಿ, ಪತ್ರಕರ್ತ ಎಂ.ರಾಘವೇಂದ್ರ, ನಗರಸಭೆ ಸದಸ್ಯರಾದ ಬಿ.ಎಚ್.ಲಿಂಗರಾಜು, ಗಣೇಶ್ ಪ್ರಸಾದ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರ, ರಂಗಕರ್ಮಿ ವಿಜಯವಾಮನ್, ನಾಟಕೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಹಾಜರಿದ್ದರು.