ಹೃದಯ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ಅವಘಡ; ಅದೃಷ್ಟವಶಾತ್​ ಹೃದಯ ಬದುಕುಳಿಯಿತು

ಹೆಅರತ
Published on

ಲಾಸ್​ ಎಂಜಲೀಸ್​: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲು ಹೃದಯವನ್ನು ಹೆಲಿಕಾಪ್ಟರ್​ನಲ್ಲಿ ಒಯ್ಯುವಾಗ ಹೆಲಿಕಾಪ್ಟರ್ ಉರುಳಿ ಬಿದ್ದಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದಿದೆ. ಅದೃಷ್ಟವಶಾತ್​ ಹೃದಯವನ್ನು ಕಾಪಾಡಿಕೊಳ್ಳಲಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ಲಾಸ್​ ಎಂಜಲೀಸ್​ನ ಕೆಕ್​ ಆಸ್ಪತ್ರೆಯ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಅನ್ನು ಇಳಿಸುವ ಏರ್ಪಾಡು ಮಾಡಲಾಗಿತ್ತು. ಹೃದಯ ದಾನಿಯಿಂದ ಪಡೆದ ಹೃದಯವನ್ನು ಹೊತ್ತು ಬಂದಿದ್ದ ಹೆಲಿಕಾಪ್ಟರ್​ ಇನ್ನೇನು ಕೆಲ ಕ್ಷಣಗಳಲ್ಲಿ ಆಸ್ಪತ್ರೆಯ ಮೇಲ್ಭಾಗದಲ್ಲಿ ಇಳಿಯಬೇಕಿತ್ತು. ಕೊನೆಯ ಸೆಕೆಂಡಿನಲ್ಲಿ ಹೆಲಿಕಾಪ್ಟರ್​ ತಿರುಗಲಾರಂಭಿಸಿದೆ. ಎರಡು ಮೂರು ಸುತ್ತು ತಿರುಗುತ್ತಾ ಇಳಿದ ಹೆಲಿಕಾಪ್ಟರ್​, ಅಡ್ಡವಾಗಿ ಬಿದ್ದಿದೆ. ತಕ್ಷಣ ಕಾರ್ಯನಿರತವಾದ ರಕ್ಷಣಾ ಸಿಬ್ಬಂದಿ,ಹೆಲಿಕಾಪ್ಟರ್​ನ ಮಧ್ಯಭಾಗದಲ್ಲಿದ್ದ ಹೃದಯವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಹೃದಯ ಕೈಗೆ ಸಿಕ್ಕುತ್ತಿದ್ದಂತೆ ಅದನ್ನು ವೈದ್ಯಕೀಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ.

ಹೆಲಿಕಾಪ್ಟರ್​ನ ಪೈಲೆಟ್​ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮತ್ತಿಬ್ಬರು ಸಿಬ್ಬಂದಿ ಹೆಲಿಕಾಪ್ಟರ್​ನಲ್ಲಿ ಇದ್ದು, ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net