

ಹೊಸನಗರ: ಕರಾವಳಿ ಮತ್ತು ಮಧ್ಯಕರ್ನಾಟಕದ ಅಗತ್ಯ ಉತ್ಪನ್ನಗಳ ಸಾಗಣೆಗೆ ಪ್ರಮುಖ ಸಂಪರ್ಕ ಕೊಂಡಿ ಹುಲಿಕಲ್ ಘಾಟ್ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಚಂಡಿಕಾಂಬಾ ದೇವಸ್ಥಾನದ ಕೆಳಭಾಗದ ಹೇರ್‌ಪಿನ್ ತಿರುವಿನಲ್ಲಿ ಮಣ್ಣು ಕುಸಿದಿದೆ. ತಡೆಗೋಡೆ ಇದ್ದರೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆಳಭಾಗದವರೆಗೂ ಮಣ್ಣು ಕುಸಿದಿದೆ. ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಒಳಭಾಗದಲ್ಲಿ ಮೂರು ಅಡಿಗಳಷ್ಟು ಕೊರೆತ ಉಂಟಾಗಿದೆ. ರಸ್ತೆಯ ಮೇಲ್ಭಾಗದಲ್ಲೂ ಸಣ್ಣ ಬಿರುಕು ಕಾಣಿಸಿಕೊಂಡಿದೆ.
ಮಂಗಳೂರಿನಿಂದ ಪೆಟ್ರೋಲಿಯಂ ಉತ್ಪನ್ನಗಳು ಸೇರಿ ಅಗತ್ಯ ವಸ್ತುಗಳ ಸರಬರಾಜಿಗೆ ಈ ಮಾರ್ಗವೇ ಪ್ರಮುಖ ಕೊಂಡಿ. ಆಗುಂಬೆ, ಕೊಲ್ಲೂರು ಘಾಟ್‌ಗಳು ಲಘು ವಾಹನಗಳಿಗೆ ಮಾತ್ರ ಸೀಮಿತವಾಗಿದ್ದು ಈ ಘಾಟ್ ಮಾರ್ಗದ ಮೇಲೆ ಹೆಚ್ಚಿನ ಒತ್ತಡವಿದೆ.
ಶಿರಾಡಿ ಮತ್ತು ಚಾರ್ಮಾಡಿ ಘಾಟ್‌ನಲ್ಲಿ ಸಂಚಾರ ಬಂದ್ ಆದಾಗಲೆಲ್ಲ ಹುಲಿಕಲ್ ಮಾರ್ಗದಲ್ಲಿ ಸಂಚರಿಸಲಾಗುತ್ತದೆ. ಈಗಲೂ ಆ ಎರಡು ಮಾರ್ಗದಲ್ಲಿ ಮಣ್ಣು ಕುಸಿದಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸಲಾಗುತ್ತಿದೆ. ಆದರೆ ಇದೀಗ ಹುಲಿಕಲ್ ಘಾಟ್ ಮಾರ್ಗವೇ ಅಪಾಯದಲ್ಲಿದೆ.
4.35 ಕೋಟಿ ರೂ. ಕಾಮಗಾರಿ: ಹೇರ್‌ಪಿನ್ ತಿರುವಿನ ರಸ್ತೆ ಅಗಲೀಕರಣ, ತಡೆಗೋಡೆಯ ಮುಂದುವರಿದ ಕಾಮಗಾರಿಗೆ 4.35 ಕೋಟಿ ರೂ. ಬಿಡುಗಡೆಯಾಗಿ ಟೆಂಡರ್ ಆಗಿದೆ. ಆದರೆ ವರ್ಕ್ ಅಗ್ರಿಮೆಂಟ್ ಆಗಿಲ್ಲ. ಈಗಾಗಲೇ ಮುಂಗಾರು ರಾಜ್ಯವನ್ನು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಕಾಮಗಾರಿ ನಡೆಸುವುದು ಕಷ್ಟ. ಇದು ಗಂಡಾಂತರಕ್ಕೆ ಕಾರಣವಾಗಿದೆ.
ದೂರದೃಷ್ಟಿ ಕೊರತೆ: ಹುಲಿಕಲ್ ಘಾಟ್ ರಸ್ತೆ ಕಾಮಗಾರಿಗೆ ಕಳೆದ ಐದಾರು ವರ್ಷದಿಂದ ಕೋಟ್ಯಾಂತರ ರೂಪಾಯಿ ವ್ಯಯಿಸಲಾಗಿದೆ. ಮಳೆಗಾಲದಲ್ಲಿ ಅಪಾಯಕ್ಕೆ ತುತ್ತಾದ ಸಂದರ್ಭದಲ್ಲಿ ಮಾತ್ರ ಕಾಮಗಾರಿ ನಿರ್ವಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸುವ ನೆರೆ ನಿರ್ವಹಣೆ ಹಣವನ್ನೂ ಈ ಘಾಟ್ ರಸ್ತೆಗೆ ಹಾಕಲಾಗಿದೆ. ಆದರೆ ಯಾವ ಪ್ರಯೋಜನವೂ ಇಲ್ಲದಂತಾಗಿದೆ.
ಮಾರ್ಗ ಬಂದ್ ಆಗುವ ಆತಂಕ: ಪ್ರಮುಖವಾಗಿ ಶಿವಮೊಗ್ಗ, ದಾವಣಗೆರೆ, ಹೊಸಪೇಟೆ ಬಳ್ಳಾರಿ ಮತ್ತಿತರ ಕಡೆಯಿಂದ ಉಡುಪಿ, ದಕ್ಷಿಣ ಕನ್ನಡ ಸಂಪರ್ಕಿಸುವ ಹುಲಿಕಲ್ ಘಾಟ್ ಪ್ರಮುಖ ಕೊಂಡಿ. ಕಾಂಕ್ರೀಟ್ ರಸ್ತೆ ಮೇಲೆ ಈಗ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಒಂದು ವೇಳೆ ರಸ್ತೆ ಕುಸಿದರೆ ಮಾರ್ಗ ಸಂಪೂರ್ಣ ಬಂದ್ ಆಗಲಿದೆ.