

ಹಾವೇರಿ: ಆಧುನಿಕತೆ ಹೆಚ್ಚಿದಂತೆ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾದರೆ, ಬದಲಾದ ಜೀವನ ಶೈಲಿಯಿಂದ ಜೀವನ ಪರ್ಯಂತ ಕಾಯಿಲೆಗಳು ಹೆಚ್ಚಾಗುತ್ತಿವೆ. ಯುವ ಜನಾಂಗವೇ ಇಂಥ ರೋಗಗಳಿಗೆ ಬಲಿಯಾಗುತ್ತಿದ್ದು, ಆರೋಗ್ಯಕರ ಜೀವನ ಶೈಲಿ ಅಳವಡಿಕೊಂಡು, ಸಮಾಜಕ್ಕೆ ಒಂದು ಉತ್ತಮ ಕೊಡುಗೆ ನೀಡಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಹೇಳಿದರು.
ನಗರದ ಹುಕ್ಕೇರಿಮಠ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ 3ನೇ ಶ್ರಾವಣ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯ ವೃತ್ತಿಯು ಅಪಾರ ಸಹನೆಯನ್ನು ನಿರೀಕ್ಷಿಸುತ್ತದೆ. ಪ್ರತಿದಿನವೂ ಹೊಸ ಸವಾಲುಗಳನ್ನು ನಾವು ವೃತ್ತಿ ಜೀವನದಲ್ಲಿ ಎದುರಿಸುತ್ತೇವೆ. ಸಮಾಜದಿಂದ ಉಪಕೃತರಾದ ನಾವು ಸಮಾಜಕ್ಕೆ ಒಂದಿಷ್ಟು ಕೊಡುಗೆಯನ್ನು ನೀಡಬೇಕಾಗಿದೆ. ಉತ್ತಮ ಆರೋಗ್ಯವಂತ ವ್ಯಕ್ತಿಯು, ದೇಶದ ಸಂಪತ್ತು ಆಗಿದ್ದು, ದೇಶ ಕಟ್ಟಲು ಆರೋಗ್ಯವಂತ ಸಮಾಜಕ್ಕೆ ನಾವು ಹೆಚ್ಚು ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಆರೋಗ್ಯ ಭಾಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ. ಸದೃಡ ದೇಹದಲ್ಲಿ ಸದೃಡ ಮನಸ್ಸಿರುತ್ತದೆ ಎನ್ನುವಂತೆ, ಉತ್ತಮ ಆಚಾರ ವಿಚಾರ, ಸಾತ್ವಿಕ ಆಹಾರ, ನಿಯಮಿತ ವ್ಯಾಯಾಮ, ಸಜ್ಜನರ ಸಹವಾಸ ನಮ್ಮನ್ನು ಉತ್ತಮ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುತ್ತದೆ. ರೋಗ ಬಂದ ಮೇಲೆ ಕೊರಗುವದಕ್ಕಿಂತ ರೋಗ ಬರದಂತೆ ನೋಡಿಕೊಳ್ಳುವದೆ ಲೇಸು. ಉತ್ತಮ ಆರೋಗ್ಯದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ನಗರದ ವೈದ್ಯರಾದ ಡಾ. ಮೃತ್ಯುಂಜಯ ತುರಕಾಣಿ, ಡಾ. ಸುದೀಪ ಪಂಡಿತ, ಡಾ. ವಿನಾಯಕ ಕರ್ಣಂ, ಡಾ. ಮಧು ಕೆ.ಆರ್. ವಿರುಪಾಕ್ಷ ಲಮಾಣಿ ದಂಪತಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಸಾಹಿತಿ ಕಲಾವಿದ ಬಳಗದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸವಣೂರ ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ ಸಾಲಿಮಠ, ಸ್ತ್ರೀ ರೋಗ ತಜ್ಞ ಡಾ. ಚಿನ್ಮಯ ಕುಲಕಣಿರ್, ನಾಗಪ್ಪ ಮುರನಾಳ, ರಾಚಣ್ಣ ಲಂಬಿ, ಶಿವಬಸಯ್ಯ ಹಾಲಯ್ಯನವರಮಠ, ಜಗದೀಶ ತುಪ್ಪದ, ಮಹೇಶ ಚಿನ್ನಿಕಟ್ಟಿ, ಮಹಾಂತೇಶ ಮಳಿಮಠ, ಆರ್.ಎಸ್. ಮಾಗನೂರ, ಶಿವಣ್ಣ ಶಿರೂರ, ಬಿ. ಬಸವರಾಜ, ಮಂಜುನಾಥ ಕಡತಿ, ಎಸ್.ವಿ. ಹಿರೇಮಠ, ಎ.ಬಿ. ಗುಡ್ಡಳ್ಳಿ, ರತ್ನಾ ಭರತನೂರಮಠ ಮತ್ತಿತರರು ಉಪಸ್ಥಿತರಿದ್ದರು.