

ನವದೆಹಲಿ: ದೈತ್ಯಾಕಾರದ ಅನಕೊಂಡವೊಂದು ಬಲೆ ಬಿದ್ದಂತಹ ವಿಡಿಯೋ ಇತ್ತೀಚೆಗಷ್ಟೇ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಭಾರಿ ವೈರಲ್ ಆಗಿದೆ. "ಚಿಕನ್ ಕದಿಯುವವನ ಹಿಡಿಯುವ ಪ್ರಯತ್ನ" ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ.
ವಿಡಿಯೋದಲ್ಲಿ ಹಾವನ್ನು ನೋಡಿದ್ರೆ ಅಚ್ಚರಿಯಾಗುವುದು ಖಂಡಿತ. ಏಕೆಂದರೆ ಹಿಂದೆಂದೂ ನೋಡಿರದ ಗಾತ್ರದಲ್ಲಿ ಅನಕೊಂಡ ಕಾಣಿಸಿಕೊಳ್ಳುತ್ತದೆ. ಮಣ್ಣು ಮಿಶ್ರಿತ ಕೆರೆಯಲ್ಲಿ ಈಜುಕೊಂಡು ಬರುವ ಅನಕೊಂಡವನ್ನು ಭಾರಿ ಗಾತ್ರದ ನೀಲಿ ಬಣ್ಣದ ಡ್ರಮ್ನಿಂದ ಸೆರೆಹಿಡಿಯುವಂತೆ ವಿಡಿಯೋದಲ್ಲಿ ಕಾಣುತ್ತದೆ. ಈ ವಿಡಿಯೋ ಎರಡು ವರ್ಷಗಳ ಹಿಂದೆಯೇ ಅಪ್ಲೋಡ್ ಆಗಿದ್ದು, ಇದೀಗ ಮತ್ತೆ ವೈರಲ್ ಆಗಿದೆ. ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.
ಆದರೆ, ವಿಡಿಯೋದಲ್ಲಿರುವ ಹಾವಿನ ಗಾತ್ರದ ಬಗ್ಗೆ ನಿಜಾಂಶ ತಿಳಿದರೆ ಅಚ್ಚರಿಯಾಗುತ್ತದೆ. ಕಾರಣ ವಿಡಿಯೋದಲ್ಲಿರುವ ಅನಕೊಂಡ ಸಾಮಾನ್ಯ ಗಾತ್ರಕ್ಕಿಂತ ಹೆಚ್ಚು ದಪ್ಪವಾಗಿ ಕಾಣುತ್ತದೆ. ಹಾಗೇ ಕಾಣುವಂತೆ ಎಡಿಟ್ ಮಾಡಲಾಗಿದೆ ಎಂದು ಫ್ಯಾಕ್ಟ್ಚೆಕ್ ವೆಬ್ಸೈಟ್ ಸ್ನೂಪ್ಸ್ (Snopes) ವರದಿ ಮಾಡಿದೆ.
ಅನಕೊಂಡದ ನಿಜವಾದ ಗಾತ್ರದ ಬಗ್ಗೆ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ಕಿಸಿ. ಅನಕೊಂಡ ಸಾಮಾನ್ಯ ಗಾತ್ರದಷ್ಟೇ ಕಾಣಿಸುತ್ತದೆ. ಇನ್ನು ನೀಲಿ ಡ್ರಮ್ನಂತೆ ಕಾಣುವುದು ಒಂದು ಸಣ್ಣ ಪೈಪ್ ಅಷ್ಟೇ. ಅದನ್ನು ಎಡಿಟ್ ಮಾಡಿ ಭಾರಿ ಗಾತ್ರದ್ದು ಎಂದು ಬಿಂಬಿಸಿ ವೈರಲ್ ಮಾಡಲಾಗಿದೆ.
ವೈರಲ್ ವಿಡಿಯೋದಲ್ಲಿರುವ ಅನಕೊಂಡ ಸುಮಾರು 50 ಅಡಿ ಉದ್ದವಿದೆ ಎಂದು ಸುಳ್ಳು ಮಾಹಿತಿ ಹರಡಲಾಗಿದೆ. ಸದ್ಯ ವಿಡಿಯೋ ಅಂತೂ ಭಾರಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್)