

ಶಿವಮೊಗ್ಗ:ಉದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಪ್ರತಿ ಪೀಳಿಗೆಗೂ ಯೋಚನೆಗಳು ಮತ್ತು ಆಲೋಚನೆಗಳು ಆಯಾ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತೆ ಬದಲಾಗುತ್ತಲೇ ಇರುತ್ತವೆ ಎಂದು ಹೂಡಿಕೆ ತಜ್ಞ ಕೆ.ಉಲ್ಲಾಸ್ ಕಾಮತ್ ಹೇಳಿದರು.
ಶಾಂತಲಾ ಸಮೂಹ ಸಂಸ್ಥೆಯಿಂದ ಏರ್ಪಡಿಸಿದ್ದ ಚರ್ಚೆಯಲ್ಲಿ ಕುಟುಂಬ ನಿರ್ವಹಣೆಯ ಉದ್ಯಮಗಳ ಬೆಳವಣಿಗೆ ಹಾಗೂ ಅವಕಾಶಗಳು ಎಂಬ ವಿಷಯದ ಕುರಿತು ಮಾತನಾಡಿದ ಅವರು, ನಮ್ಮ ಹಿರಿಯರು ಸಾಧನೆಯ ಗುರಿಯೊಂದಿಗೆ ಉದ್ಯಮ ಪ್ರಾರಂಭ ಮಾಡುತ್ತಿದ್ದರು.ಆದರೆ ಇಂದಿನ ಯುವ ಸಮೂಹ ಲಾಭದ ನಿರೀಕ್ಷೆಯಲ್ಲಿ ಉದ್ಯಮವನ್ನು ನೋಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈಗ ಅವಕಾಶಗಳು ಹೆಚ್ಚು. ಹಳೆಯದನ್ನು ನಿರ್ವಹಣೆ ಮಾಡುತ್ತಲೇ ಹೊಸದನ್ನು ಆಕರ್ಷಿಸಬೇಕು. ಎರಡರ ನಡುವೆ ಸಮನ್ವಯದಲ್ಲಿ ಕುಟುಂಬ ಒಡೆತನದ ಸಂಸ್ಥೆಗಳನ್ನು ಕೊಂಡೊಯ್ಯಬೇಕು. ಈಗಿನ ಪೀಳಿಗೆಗೆ ಜಾಗತಿಕ ಮಾರುಕಟ್ಟೆಯ ಮಾಹಿತಿಯಿದೆ. ಹೊಸತನ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಗುಣ ಹಾಗೂ ಕಾರ್ಯದಕ್ಷತೆಯುಳ್ಳ ಉದ್ಯೋಗಿಗಳ ನೆರವು ಪಡೆದರೆ ಬೆಳವಣಿಗೆಗೆ ಮುಕ್ತ ಅವಕಾಶವಿದೆ. ಇಂದಿನ ಪೀಳಿಗೆ ಮಾನವ ಶಕ್ತಿಗಿಂತ ತಂತ್ರಜ್ಞಾನದ ಬಳಕೆಗೆ ಹೆಚ್ಚು ಒತ್ತು ನೀಡುತ್ತದೆ ಎಂದರು.
ಮೇಕ್ ಇನ್ ಇಂಡಿಯಾ, ಚೈನಾ ಪ್ಲಸ್ ಒನ್ ಪಾಲಿಸಿ ಸೇರಿದಂತೆ ಉದ್ಯಮ ವಲಯದಲ್ಲಿನ ಅಗಾಧ ಅವಕಾಶಗಳ ಪರಿಣಾಮ 2032ರ ವೇಳೆಗೆ ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳು (ಮಹಾರಾಷ್ಟ್ರ, ಗುಜರಾತ್, ಆಂಧ್ರ-ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ) ಒಂದು ಟ್ರಿಲಿಯನ್ ಡಾಲರ್ (87 ಲಕ್ಷ ಕೋಟಿ) ಆರ್ಥಿಕತೆ ಹೊಂದಲಿವೆ. ಈ ಆರು ರಾಜ್ಯಗಳೊಂದಿಗೆ ಆ ವೇಳೆಗೆ ಜಾಗತಿಕವಾಗಿ 19 ದೇಶಗಳು ಮಾತ್ರ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿವೆ ಎಂದು ಅಂದಾಜಿಸಿದರು.
ಚೈನಾ ಪ್ಲಸ್ ಒನ್ ಮೂಲಕ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಇಲ್ಲಿಯೇ ಉತ್ಪಾದಿಸುವ ಹಾಗೂ ಚೀನಾ ಎಲ್ಲೆಲ್ಲಿಗೆ ರಫ್ತು ಮಾಡುತ್ತದೆಯೋ ಅಲ್ಲಿಗೆ ಅದೇ ಉತ್ಪನ್ನಗಳನ್ನು ರಫ್ತು ಮಾಡುವ ಆಶಯ ಹೊಂದಲಾಗಿದೆ. ಹೀಗಾಗಿ ಉದ್ಯಮ ವಲಯದಲ್ಲಿ ಅವಕಾಶಗಳು ಮುಕ್ತವಾಗಿವೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಶೇ.19ರಷ್ಟಿರುವ ಉದ್ಯಮಗಳ ಪಾಲನ್ನು 2032ಕ್ಕೆ ಶೇ.25ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಕುಟುಂಬ ನಿರ್ವಹಣೆಯ ಉದ್ಯಮಗಳಿಗೂ ಬೆಳವಣಿಗೆಗೆ ಹೆಚ್ಚು ಅವಕಾಶವಿದೆ.
ವಿಶ್ವದ 500 ಕುಟುಂಬಗಳ ಒಟ್ಟು ಆಸ್ತಿ ಮೌಲ್ಯ ಎಂಟು ಟ್ರಿಲಿಯನ್ ಡಾಲರ್. ಅದು ಭಾರತದ ಜಿಡಿಪಿಯ ದುಪ್ಪಟ್ಟು ಮೌಲ್ಯವಾಗಿದೆ. ಉತ್ತರಾಧಿಕಾರಿ ಇಲ್ಲದಿರುವುದು, ತಲೆಮಾರುಗಳ ನಡುವಿನ ಭಿನ್ನ ಆಲೋಚನೆಗಳ ಪರಿಣಾಮ ಕುಟುಂಬಗಳ ಒಡೆತನದ ಉದ್ಯಮಗಳಲ್ಲಿ ಶೇ.70ರಷ್ಟು ಒಂದೇ ಪೀಳಿಗೆಗೆ ಮುಕ್ತಾಯವಾಗುತ್ತಿವೆ. ಶೇ.30ರಷ್ಟು ಮಾತ್ರ ವಿಸ್ತರಣೆ ಹಾಗೂ ಲಾಭಾಂಶ ಪ್ರಮಾಣದಲ್ಲಿ ಏರಿಕೆ ಕಂಡು ಮುಂದುವರೆಯುತ್ತಿವೆ. ಮೂರನೇ ತಲೆಮಾರಿಗೆ ಆ ಪ್ರಮಾಣ ಶೇ.3ಕ್ಕೆ ಇಳಿಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ, ಶಾಂತಲಾ ಸಮೂಹದ ಡಿ.ಜಿ.ಬಸವರಾಜ್, ಡಿ.ಎಸ್.ಚಂದ್ರಶೇಖರ್, ಎಚ್.ಮಹೇಂದ್ರಪ್ಪ ಉಪಸ್ಥಿತರಿದ್ದರು.