

ನವದೆಹಲಿ: ಸದನಗಳ ಕಲಾಪಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಗುರುವಾರ ರಾಜ್ಯಸಭೆಯ ಒಬ್ಬ ಮತ್ತು ಲೋಕಸಭೆಯ 14 ವಿಪಕ್ಷ ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ 14 ಪ್ರತಿಪಕ್ಷ ಸಂಸದರನ್ನು ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎರಡು ಸಂದರ್ಭಗಳಲ್ಲಿ ಪ್ರತ್ಯೇಕ ಗೊತ್ತುವಳಿಗಳನ್ನು ಮಂಡಿಸಿದರು. ಅಮಾನತಿಗೂ ಮುನ್ನ ಎಂಪಿಗಳು ಸ್ಪೀಕರ್ ಪೀಠದ ಮುಂದೆ ಹೋಗಿ ತಮ್ಮ ಬೇಡಿಕೆ ಪರವಾಗಿ ಘೋಷಣೆಗಳನ್ನು ಕೂಗಿದರು.
ಗದ್ದಲದಿಂದಾಗಿ ಪ್ರಶ್ನೋತ್ತರ ವೇಳೆಯಲ್ಲಿ ಕಲಾಪಕ್ಕೆ ಅಡ್ಡಿಯುಂಟಾಗಿ ಸದನವನ್ನು ಮೊದಲ ಸಲ ಮಧ್ಯಾಹ್ನ 2 ಗಂಟೆ ವರೆಗೆ ಮುಂದೂಡಲಾಯಿತು. ಎರಡು ಗಂಟೆಗೆ ಸದನ ಮತ್ತೆ ಸೇರಿದಾಗ, ಸಂಸತ್ತಿನ ಆಂತರಿಕ ಭದ್ರತೆ ವಿಚಾರ ಸ್ಪೀಕರ್ ವ್ಯಾಪ್ತಿಗೆ ಬರುತ್ತದೆ ಎಂದು ಸಚಿವ ಜೋಶಿ ಹೇಳಿದರು. ಐವರು ಎಂಪಿಗಳನ್ನು ಅಮಾನತು ಮಾಡುವ ನಿರ್ಧಾರವನ್ನು ಅವರು ಪ್ರಕಟಿಸಿದಾಗ ಮತ್ತೆ ಗದ್ದಲವಾಗಿ ಕಲಾಪವನ್ನು ಮಧ್ಯಾಹ್ನ 3 ಗಂಟೆವರೆಗೆ ಮುಂದೂಡಲಾಯಿತು. ಸದನ ಮತ್ತೆ ಸಮಾವೇಶಗೊಂಡಾಗ ಕಾಂಗ್ರೆಸ್, ಸಿಪಿಎಂ, ಸಿಪಿಐ, ಡಿಎಂಕೆ ಸಹಿತ ವಿವಿಧ ಪಕ್ಷಗಳ ಇನ್ನೂ ಒಂಬತ್ತು ಸದಸ್ಯರನ್ನು ಅಮಾನತುಗೊಳಿಸುವ ಗೊತ್ತುವಳಿಯನ್ನು ಜೋಷಿ ಮಂಡಿಸಿದರು.
ಭದ್ರತಾ ಲೋಪ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ಪ್ರಾರಂಭಿಸಲಾಗಿದೆ. ಈ ವಿಷಯ ರಾಜಕೀಯಗೊಳಿಸಬಾರದು ಎಂದು ವಿಪಕ್ಷ ನಾಯಕರಿಗೆ ಸೂಚ್ಯವಾಗಿ ತಿಳಿಸಿದರು. ರಾಜ್ಯಸಭೆಯಲ್ಲಿ ‘ದುರ್ವರ್ತನೆ’ ತೋರಿದ್ದಕ್ಕಾಗಿ ಟಿಎಂಸಿ ಸದಸ್ಯ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಯಿತು.
ಗೈರಾಗಿದ್ದರೂ ಅಮಾನತು!: ಡಿಎಂಕೆ ಸಂಸದ ಎಸ್.ಆರ್.ಪಾರ್ಥಿಬನ್ ಹೆಸರು ಕೂಡ ಇಂದು ಅಮಾನತಾದ ಸಂಸದರ ಪಟ್ಟಿಯಲ್ಲಿತ್ತು. ಆದರೆ ಅವರು ಅನಾರೋಗ್ಯದ ಕಾರಣ ಅನುಪಸ್ಥಿತ ರಾಗಿದ್ದರು. ಅದಾಗ್ಯೂ ತಮ್ಮ ಹೆಸರು ಅಮಾನತಾದವರ ಪಟ್ಟಿಯಲ್ಲಿ ಇರುವುದನ್ನು ನೋಡಿ ಅದನ್ನೊಂದು ಜೋಕ್ ಎಂದು ವ್ಯಂಗ್ಯವಾಡಿದ್ದರು. ಕೊನೆಗೆ ತಪ್ಪಾಗಿ ಅವರ ಹೆಸರು ಸೇರಿದ್ದನ್ನು ಮನಗಂಡು, ಅಮಾನತು ಪಟ್ಟಿಯಿಂದ ಅವರ ಹೆಸರು ತೆಗೆಯಲಾಗಿದೆ.
ಪ್ರತಾಪ್ ಸಸ್ಪೆಂಡ್ಗೆ ಆಗ್ರಹ: ಸಂಸತ್ ಭದ್ರತೆ ಲೋಪದ ವಿರುದ್ಧ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಸಂಸದ ಪ್ರತಾಪ್ ಸಿಂಹರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದವು. ‘ಬಿಜೆಪಿ ಐಟಿ ಸೆಲ್ 2 ಸಂಗತಿಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ತೀವ್ರವಾಗಿ ಬಯಸುತ್ತದೆ. 1. ಸಂಸತ್ತಿನ ಭದ್ರತೆಯಲ್ಲಿ ಬಹಳ ಗಂಭೀರ ಉಲ್ಲಂಘನೆಯಾಗಿರುವುದು 2. ಆಘಾತಕಾರಿ ರೀತಿಯಲ್ಲಿ ಲೋಕಸಭೆಯ ಭದ್ರತೆಯನ್ನು ಉಲ್ಲಂಘಿಸಿದವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿರುವುದು’ ಎಂದು ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಜೈರಾಂ ರಮೇಶ್ ಕಿಡಿಕಾರಿದರು.
ಸಂಸತ್ಗೆ ಬಿಗಿ ಭದ್ರತೆ: ಭಾರೀ ಭದ್ರತೆ ಲೋಪದ ಘಟನೆಯ ಒಂದು ಬಳಿಕ ಸಂಸತ್ತಿನಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಮತ್ತು ಸಂಸತ್ತಿನ ಭದ್ರತಾ ಸಿಬ್ಬಂದಿ ಸಂಸತ್ಗೆ ಬರುತ್ತಿದ್ದವರನ್ನು ಸಂಪೂರ್ಣ ಪರಿಶೀಲನೆ ನಡೆಸಿದರು. ಸಂಸತ್ ಸಮುಚ್ಚಯದಿಂದ 1 ಮೀಟರ್ ದೂರದಲ್ಲಿರುವ ಸಾರಿಗೆ ಭವನದ ಹೊರಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ, ಗುರುತಿನ ಚೀಟಿಗಳನ್ನು ಪರಿಶೀಲಿಸುವ ತನಕ ಯಾರನ್ನೂ ಬ್ಯಾರಿಕೇಡ್ ದಾಟಿ ಹೋಗಲು ಅನುಮತಿಸುತ್ತಿರಲಿಲ್ಲ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರನ್ನು ಹೊಸ ಸಂಸತ್ಗೆ ಮಕರ ದ್ವಾರದಿಂದ ಪ್ರವೇಶಿಸಲು ಅನುಮತಿಸಲಿಲ್ಲ. ನಂತರ ಸಂಗ್ಮಾ ತಮ್ಮ ಕಾರಿನಿಂದ ಇಳಿದು ಶಾರ್ದೂಲ್ ದ್ವಾರದ ಮೂಲಕ ತೆರಳಿದರು. ಪಾಸ್ ಇಲ್ಲದ ಸಂಸತ್ ಸದಸ್ಯರ ಚಾಲಕರೂ ಸಂಸತ್ ಒಳಗೆ ಬರಲು ಅವಕಾಶವಿರಲಿಲ್ಲ. ಮಾಧ್ಯಮ ಪ್ರತಿನಿಧಿಗಳು ತಮ್ಮ ಗುರುತಿನ ಪತ್ರಗಳನ್ನು ತೋರಿಸಿದ್ದಲ್ಲದೆ, ಅಧಿಕಾರಿಗಳ ಪ್ರಶ್ನೆಗಳಿಗೂ ಉತ್ತರಿಸಬೇಕಾಯಿತು. ಹಳೆಯ ಸಂಸತ್ ಭವನದ ಗೇಟ್ ಸಂಖ್ಯೆ 12ರ ಬಳಿಯಿರುವ ಹುಲ್ಲುಹಾಸಿನ ಬಳಿ ಮಾಧ್ಯಮ ಮಂದಿಯನ್ನು ಸ್ಥಳಾಂತರಿಸಲಾಯಿತು. ಹೊಸ ಸಂಸತ್ ಭವನದ ಮಕರ ದ್ವಾರಕ್ಕೆ ಯಾರಿಗೂ ಪ್ರವೇಶ ಇರಲಿಲ್ಲ.