ಜೂನ್​​ 21ಕ್ಕೆ ಥಿಯೇಟರ್​​ಗಳಲ್ಲಿ ರೀರಿಲೀಸ್​ ಆಗಲಿದೆ ಹೃತಿಕ್ ರೋಷನ್ ಅಭಿನಯದ ಈ ಸಿನಿಮಾ

Untitled-design-2024-06-18T184115.641
Published on

ಮುಂಬೈ: ಹೃತಿಕ್ ರೋಷನ್ 'ಕಹೋ ನಾ ಪ್ಯಾರ್ ಹೈ' ಚಿತ್ರದೊಂದಿಗೆ 2000ರಲ್ಲಿ ಬಿಟೌನ್​ನಲ್ಲಿ ತಮ್ಮ ವೃತ್ತಿಜೀವನನ್ನು ಆರಂಭಿಸಿದರು. 24 ವರ್ಷಗಳ ವೃತ್ತಿಜೀವನದಲ್ಲಿ 43ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ 20 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಲಕ್ಷ್ಯ' ಚಿತ್ರ ಥಿಯೇಟರ್‌ಗಳಲ್ಲಿ ರೀ-ರಿಲೀಸ್ ಆಗುತ್ತಿದೆ.

1999ರ ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದ ಲಕ್ಷ್ಯ ಸಿನಿಮಾ ಜೂನ್ 18, 2004ರಂದು ಬಿಡುಗಡೆಯಾಗಿತ್ತು. ಆ ಕಾಲಕ್ಕೆ ಚಿತ್ರ ದೊಡ್ಡ ಹಿಟ್ ಆಗಿತ್ತು. 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಸಿನಿಮಾ ಈ ವಾರಾಂತ್ಯದಲ್ಲಿ ಚಿತ್ರಮಂದಿರಗಳಿಗೆ ಮತ್ತೆ ಮರಳುತ್ತಿದೆ. ಚಿತ್ರವು 2024 ಜೂನ್ 21 ರಂದು (ಶುಕ್ರವಾರ) ಬಿಡುಗಡೆಯಾಗಲಿದೆ. ಭಾರತದಾದ್ಯಂತ 20ಕ್ಕೂ ಹೆಚ್ಚು ನಗರಗಳಲ್ಲಿ 50ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

'ಲಕ್ಷ್ಯ' ಮತ್ತೆ ತೆರೆಗೆ ಬರಲಿದೆ ಎಂದು ಹೃತಿಕ್ ಮತ್ತು ಫರ್ಹಾನ್ ಇಬ್ಬರೂ ತಮ್ಮ ಎಕ್ಸ್​​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬನ್ನಿ, ಲೆಕ್ಕವಿಲ್ಲದಷ್ಟು ಕನಸುಗಳನ್ನು ಹೊತ್ತಿಸಿದ ಮತ್ತು ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ಚಲನಚಿತ್ರದ ಪ್ರಯಾಣವನ್ನು ಮೆಲುಕು ಹಾಕಿ. ಲಕ್ಷ್ಯದ 20 ವರ್ಷಗಳ ಸಂಭ್ರಮಾಚರಣೆ ಜೂನ್ 21ರಂದು ಮತ್ತೆ ಚಿತ್ರಮಂದಿರಗಳಲ್ಲಿ ಎಂದು ಚಿತ್ರದ ಟ್ರೇಲರ್ ಜತೆಗೆ ಶೀರ್ಷಿಕೆಯನ್ನು ಫರ್ಹಾನ್ ಅಖ್ತರ್ ಹಂಚಿಕೊಂಡಿದ್ದಾರೆ.

ಫರ್ಹಾನ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ್ದ ಲಕ್ಷ್ಯದಲ್ಲಿ ಅಮಿತಾಬ್ ಬಚ್ಚನ್ ಮತ್ತು ಪ್ರೀತಿ ಜಿಂಟಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬೊಮನ್ ಇರಾನಿ, ಅಂಜುಲಾ ಬೇಡಿ, ಲಿಲ್ಲೆಟ್ ದುಬೆ, ಎಂಕೆ ರೈನಾ, ಕುಶಾಲ್ ಪಂಜಾಬಿ ಮತ್ತು ಓಂ ಪುರಿ ಬಹುತಾರಾಗಣ ಸಿನಿಮಾದಲ್ಲಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net