ಎಸ್‌ಜೆಪಿಯಲ್ಲಿ ಎಚ್‌ಪಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗೇಮಿಂಗ್ ಲ್ಯಾಬ್ ಆರಂಭ

SJP HP AI Lab
Published on

ಬೆಂಗಳೂರು: ಎಚ್‌ಪಿ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್) ಅನುದಾನದಲ್ಲಿ ನಗರದ ಸರ್ಕಾರಿ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜುಬಿಲಿ ಟೆಕ್ನಾಲಾಜಿಕಲ್ ಇನ್‌ಸ್ಟಿಟ್ಯೂಟ್ (ಎಸ್‌ಕೆಎಸ್‌ಜೆಪಿ)ನಲ್ಲಿ ಸ್ಥಾಪಿಸಿರುವ ವಿಶ್ವದರ್ಜೆಯ ‘ಎಚ್‌ಪಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆೃಂಡ್ ಗೇಮಿಂಗ್ ಲ್ಯಾಬ್’ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎಚ್‌ಪಿ ಎಐ ಗೇಮಿಂಗ್ ಲ್ಯಾಬ್ ವಿದ್ಯಾರ್ಥಿಗಳನ್ನು ಕೌಶಲಾಧಾರಿತ ಶಿಕ್ಷಣದತ್ತ ಒಯ್ಯುವ ಪ್ರಯತ್ನಕ್ಕೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಇದೇ ರೀತಿಯ ಸೌಲಭ್ಯಗಳನ್ನು ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಪ್ರತಿ ಕ್ಷೇತ್ರದಲ್ಲಿಯೂ ಎಐ ಅನಿವಾರ್ಯವಾಗಿದೆ. ವೃತ್ತಿ ಶಿಕ್ಷಣ ಮಾತ್ರವಲ್ಲದೆ, ಸಾಮಾಜಿಕ ವಿಜ್ಞಾನಗಳಲ್ಲಿಯೂ ಇದಕ್ಕೆ ಮಹತ್ವದ ಪಾತ್ರವಿದೆ. ಸರ್ಕಾರಿ ಕಾಲೇಜುಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿದೆ. ಈ ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಚಟುವಟಿಕೆ ಮತ್ತು ಪ್ರತಿಭೆ ಇರುವುದರಿಂದ ಇವರ ಶೈಕ್ಷಣಿಕ ಬೆಳವಣಿಗೆಗೆ ಈ ತರಬೇತಿ ಕೇಂದ್ರಗಳು ಉತ್ತಮ ವೇದಿಕೆಯಾಗಲಿವೆ ಎಂದು ತಿಳಿಸಿದರು.

ಗೇಮಿಂಗ್ ಲ್ಯಾಬ್ ಭವಿಷ್ಯ ರೂಪಿಸುವ ಸಾಧನ

ಈ ಲ್ಯಾಬ್ ವಿದ್ಯಾರ್ಥಿಗಳ ಅಧ್ಯಯನ ಮತ್ತು ಭವಿಷ್ಯ ರೂಪಿಸಲು ಮಹತ್ವದ ಸಾಧನವಾಗಲಿದೆ. ಗೇಮಿಂಗ್ ಲ್ಯಾಬ್ ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ, ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ವೃದ್ಧಿಸಿಕೊಳ್ಳಬೇಕು. ಎಚ್‌ಪಿ ಸಂಸ್ಥೆಯ ಶಿಕ್ಷಕರು ಒಂದು ವರ್ಷ ಕಾಲ ತರಬೇತಿ ನೀಡಲಿದ್ದು, ಇದರ ಪ್ರಯೋಜನವನ್ನು ಪಡೆದು ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಗೆ ತಲುಪಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಚ್‌ಪಿ ಸಂಸ್ಥೆ ಉಪಾಧ್ಯಕ್ಷೆ ಇಪ್ಷಿತಾ ಬಸು ಗುಪ್ತಾ, ಉನ್ನತ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಯುವಿಸಿಇ ನಿರ್ದೇಶಕ ತ್ರಿಪಾಠಿ, ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು.

ಸಮಕಾಲೀನ ಕೌಶಲಾಧಾರಿತ ಸವಾಲುಗಳನ್ನು ಎದುರಿಸುವ ದಿಕ್ಕಿನಲ್ಲಿ ನಾವು ಸಾಗಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಇದ್ದರೂ ಅವುಗಳಿಗೆ ಪೂರಕ ಕೌಶಲ ಇಲ್ಲದಿರುವುದೇ ನಿರುದ್ಯೋಗಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಕೌಶಲ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. - ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net