

ಜೀವನದಲ್ಲಿ ಯಾವ ಔಟ್ಲುಕ್ ಇಟ್ಟುಕೊಂಡರೆ ಚೆನ್ನಾಗಿರುತ್ತದೆ? ಕೆಲವರು ಜೀವನ ನಶ್ವರ ಅನ್ನುವುದನ್ನು ಯಾವಾಗಲೂ ಭಾವಿಸುತ್ತಿರಬೇಕು ಎಂದು ಹೇಳಿ ವೈರಾಗ್ಯಪರತೆಯನ್ನು ಎತ್ತಿ ಹೇಳುತ್ತಾರೆ. ಇನ್ನೂ ಕೆಲವರು ಜೀವನ ನಶ್ವರ ಎಂದು ತಿಳಿದುಕೊಂಡರೆ ಅದೊಂದು ನೆಗೆಟಿವ್ ಔಟ್ಲುಕ್ ಆಗುತ್ತದೆ, ದೀರ್ಘಕಾಲಿಕವಾದ ಯಾವ ಯೋಜನೆಯನ್ನು ಹಾಕಿಕೊಳ್ಳಲೂ ಸಾಧ್ಯವಾಗುವುದಿಲ್ಲ ಮತ್ತು ಜೀವನವನ್ನು ಸುಖವಾಗಿ ಅನುಭವಿಸಲು ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಾವು ದೀರ್ಘಕಾಲ ಇರುತ್ತೇವೆ ಎಂದುಕೊಂಡು ಅದಕ್ಕೆ ತಕ್ಕಂತಹ ಯೋಜನೆಗಳನ್ನು ಹಾಕಿಕೊಳ್ಳುವುದು, ಸುಖ ಸಂತೋಷದಿಂದ ಇರುವುದು ಸರಿ, ಆದರೆ ದೀರ್ಘಕಾಲ ಇರುತ್ತೇವೆ ಎನ್ನುವುದಕ್ಕೆ ಭರವಸೆ ಏನು? ಹೀಗಿರಬೇಕಾದರೆ ಯಾವುದು ಒಂದು ಸಮತೋಲಿತ ಔಟ್ಲುಕ್ ಎಂದು ಚಿಂತಿಸಿದರೆ ಅಲ್ಲಿ ಋಷಿಗಳು ಕೊಟ್ಟಿರುವ ಒಂದು ಸುಭಾಷಿತ ಬಹಳ ಉಪಯೋಗಕ್ಕೆ ಬರುತ್ತದೆ.
ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥಂಚ ಸಾಧಯೇತ್, ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್
ಈ ಸುಭಾಷಿತದ ಅರ್ಥ ಹೀಗಿದೆ: ನಾನು ಎಂದೆಂದಿಗೂ ಇರುತ್ತೇನೆ ಎಂದು ಭಾವಿಸಿಕೊಂಡು ವಿದ್ಯೆಯನ್ನು ಮತ್ತು ಧನವನ್ನು ಸಂಪಾದನೆ ಮಾಡಬೇಕು, ಮೃತ್ಯುವು ನನ್ನ ಜುಟ್ಟನ್ನು ತನ್ನ ಕೈಯಲ್ಲಿ ಹಿಡಿದಿದೆ ಅಂದರೆ ಯಾವಾಗ ಬೇಕಾದರೂ ಮೃತ್ಯು ಸಂಭವಿಸಬಹುದು ಅನ್ನುವ ಭಾವನೆ ಇಟ್ಟುಕೊಂಡು ಆ ಆತುರದಲ್ಲಿ ಧರ್ಮಕಾರ್ಯವನ್ನು ಮಾಡಬೇಕು. ವಿದ್ಯೆಯನ್ನು ಸದಾಕಾಲವೂ ಸಂಪಾದನೆ ಮಾಡುತ್ತಿರಬೇಕು, ಹಾಗೆಯೇ ಧನ(ಅರ್ಥ)ವನ್ನು ಸಂಪಾದನೆ ಮಾಡುವುದು ಕೆಟ್ಟದ್ದಾ ಎಂದರೆ, ಖಂಡಿತವಾಗಿಯೂ ಕೆಟ್ಟದ್ದಲ್ಲ. ಅರ್ಥಸಂಪಾದನೆ ಇದ್ದರೆ ನಮ್ಮ ಜೀವನರಥ ಸುಗಮವಾಗಿ ನಡೆಯುತ್ತಿರುತ್ತದೆ, ಧರ್ಮಕ್ಕೆ ಅನುಗುಣವಾಗಿ ಅರ್ಥ ಎನ್ನುವುದು ಇದ್ದಾಗ ಅದು ಪುರುಷಾರ್ಥಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳು ಜೀವನದ ಗುರಿಯಾಗಿರಬೇಕು ಮತ್ತು ಅವುಗಳನ್ನು ಪಡೆಯಲು ಜೀವನಪೂರ್ತಿ ಪರಿಶ್ರಮಿಸಬೇಕು. ಈ ನೇರದಲ್ಲಿ ನಾವು ಧರ್ಮಕ್ಕೆ ಅನುಗುಣವಾಗಿರುವ ಅರ್ಥ ಸಂಪಾದನೆ ಮಾಡಬೇಕು.
ಗೃಹೀತ ಇವ ಕೇಶೇಷು... ಎಲ್ಲಿ ಧರ್ಮ ಕಾರ್ಯ ಮಾಡಬೇಕೋ ಅಲ್ಲಿ ವಿಳಂಬ ಮಾಡಬಾರದು ಎಂದು ಈ ಸುಭಾಷಿತ ಹೇಳುತ್ತದೆ. ಯಾವ ಕಾರ್ಯ ಧರ್ಮದಿಂದ ಕೂಡಿರುವುದಿಲ್ಲವೋ ಅದನ್ನು ಮುಂದೂಡಬೇಕು. ಏಕೆಂದರೆ ನಮ್ಮ ಪ್ರವೃತ್ತಿ ಧರ್ಮದಲ್ಲಿಯೂ ತೊಡಗಬಹುದು ಅಧರ್ಮದಲ್ಲಿಯೂ ತೊಡಗಬಹುದು, ಧರ್ಮದಲ್ಲಿ ತೊಡಗಿದಾಗ ತಕ್ಷಣವೇ ಆ ಕೆಲಸ ಮಾಡಬೇಕು. ಆದರೆ ಅಧರ್ಮದಲ್ಲಿ ನಮ್ಮ ಪ್ರವೃತ್ತಿಯು ತೊಡಗಿದಾಗ ಎಷ್ಟು ಸಾಧ್ಯವೋ ಅಷ್ಟು ವಿಳಂಬ ಮಾಡಬೇಕು.
ಇದನ್ನು ರಾವಣನ ಉದಾಹರಣೆ ಯೊಂದರಿಂದ ಅರ್ಥ ಮಾಡಿಕೊಳ್ಳಬಹುದು. ರಾವಣ ತ್ರಿಲೋಕ ವಿಜೇತ, ಒಮ್ಮೆ ಅವನು ಸ್ವರ್ಗ, ನರಕ ಎಲ್ಲವನ್ನೂ ಜಯಿಸಬೇಕೆಂಬ ದೃಷ್ಟಿಯಿಂದ ನರಕಕ್ಕೆ ಹೋಗುತ್ತಾನೆ. ಅಲ್ಲಿ ಅನೇಕ ಜೀವಿಗಳು ಶಿಕ್ಷೆಯನ್ನು ಅನುಭವಿಸುವ ಸಲುವಾಗಿ ಪರಿತಪಿಸುತ್ತಿರುವುದನ್ನು ನೋಡುತ್ತಾನೆ.
ಆಗ ಅವನು ಮನಸ್ಸಿನಲ್ಲಿ ಜೀವಿಗಳು ಇಷ್ಟೆೆಲ್ಲ ಹಿಂಸೆಯನ್ನು ಅನುಭವಿಸುತ್ತಿರುವರಲ್ಲ, ಹಾಗಾಗಿ ನಾನು ನನ್ನ ತಪಶ್ಶಕ್ತಿಯಿಂದ ನರಕದಿಂದ ಸ್ವರ್ಗಕ್ಕೆ ಸೇತುವೆಯನ್ನು ನಿರ್ವಿುಸಿ ಎಲ್ಲರೂ ನೇರವಾಗಿ ಸ್ವರ್ಗಕ್ಕೆ ಹೋಗುವಂತೆ ಮಾಡುತ್ತೇನೆ ಎಂದುಕೊಳ್ಳುತ್ತಾನೆ. ರಾವಣನು ಹಾಗೆ ಯೋಚಿಸಿದವನು ‘ಆಮೇಲೆ ಮಾಡುತ್ತೇನೆ’ ಎಂದುಕೊಳ್ಳುತ್ತಾನೆ. ಆದರೆ ಆ ‘ಆಮೇಲೆ’ ಬರುವುದೇ ಇಲ್ಲ. ಹಾಗಾಗಿ ಅವನು ತನ್ನ ಜೀವಿತಾವಧಿಯಲ್ಲಿ ಆ ಕಾರ್ಯವನ್ನು ಮಾಡಲೇ ಇಲ್ಲ.
ಆದರೆ ಮುಂದೊಮ್ಮೆ ಅವನಿಗೆ ಸೀತಾಪಹರಣವನ್ನು ಮಾಡಬೇಕು ಎಂಬ ಬುದ್ಧಿ ಉಂಟಾಗುತ್ತದೆ, ಅದು ಅಧರ್ಮದ ಕಾರ್ಯ. ಹಾಗಾಗಿ ಅದನ್ನು ಆದಷ್ಟು ವಿಳಂಬ ಮಾಡಲು ನಿರ್ಧರಿಸಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ ಅವನು ತಕ್ಷಣವೇ ಪ್ರವೃತ್ತನಾದ ಹಾಗೂ ಅದರಿಂದ ತನ್ನ ವಿನಾಶವನ್ನು ತಾನೇ ತಂದುಕೊಂಡ.
ನಾವು ಜೀವನದಲ್ಲಿ ಯಾವ ವಿಧವಾದ ಔಟ್ಲುಕ್ ಇಟ್ಟುಕೊಳ್ಳಬೇಕು ಅನ್ನುವುದಕ್ಕೆ ಈ ಸುಭಾಷಿತವು ನಮಗೆ ಮಾರ್ಗದರ್ಶನ ಮಾಡುತ್ತದೆ, ಅದರಿಂದ ವಿಪರೀತ(ವಿರುದ್ಧ)ವಾದರೆ ಹೇಗೆ ದುಷ್ಪರಿಣಾಮ ಉಂಟಾಗುತ್ತದೆ ಅನ್ನುವುದಕ್ಕೆ ಒಂದು ಉದಾಹರಣೆಯನ್ನೂ ಋಷಿಗಳು ಕಣ್ಮುಂದೆ ಇಟ್ಟಿದ್ದಾರೆ.
ಹೀಗಾಗಿ ನಾವು ಸದಾಕಾಲದಲ್ಲಿಯೂ ಆಲಸ್ಯವಿಲ್ಲದೇ ವಿದ್ಯೆಯನ್ನು ಮತ್ತು ಅರ್ಥವನ್ನು ಸಂಪಾದನೆ ಮಾಡಿಕೊಳ್ಳೋಣ, ಅದರಲ್ಲಿ ಹಿಂಜರಿಯದೇ ನಮ್ಮ ಜೀವನವನ್ನು ಸುಗಮವಾಗಿ ಮಾಡಿಕೊಳ್ಳೋಣ ಮತ್ತು ಸದಾಕಾಲದಲ್ಲಿಯೂ ಧರ್ಮ ಕಾರ್ಯದಲ್ಲಿ ತೊಡಗಿರೋಣ. ಇದರಿಂದ ಪುರುಷಾರ್ಥಸಾಧನೆ ಉಂಟಾಗಿ ನಮ್ಮ ಜೀವನ ಸುಲಲಿತವಾಗುತ್ತದೆ. ಈ ಸುಭಾಷಿತವನ್ನು ಕೊಟ್ಟಂತಹ ಋಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸೋಣ.