

ನವದೆಹಲಿ: ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವದೇಶ ವಸ್ತುಗಳ ಬಳಕೆಗೆ ಕರೆ ಕೊಟ್ಟಿದ್ದರು. ಇದರ ಮುಂದುವರೆದ ಭಾಗವಾಗಿ ಭಾರತ ಇದೀಗ ಇತಿಹಾಸವನ್ನೇ ಸೃಷ್ಟಿಸಿಬಿಟ್ಟಿದೆ. ಕರೊನಾ ಮಹಾಮಾರಿಯನ್ನು ದೇಶದಿಂದ ತೊಲಗಿಸುವ ನಿಟ್ಟಿನಲ್ಲಿ ಭಾರತ ಹೊಸ ಸಾಹಸಕ್ಕೆ ಕೈಹಾಕಿದೆ.
ಹೌದು. ಕರೊನಾ ವೈರಸ್ ಭಾರತದ ಮೇಲೆ ದಾಳಿ ಇಟ್ಟಂದಿನಿಂದ ಈ ವೈರಸ್ಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಕರೊನಾ ತವರು ಚೀನಾದ ಮೇಲೆಯೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದರಲ್ಲಿಯೂ ಕರೊನಾ ಸೋಂಕು ಪತ್ತೆಗೆ ಪ್ರಮುಖವಾಗಿ ಬೇಕಾಗಿರುವ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ (ಸ್ವ್ಯಾಬ್ ಟೆಸ್ಟ್) ಉಪಕರಣಕ್ಕಂತೂ ಚೀನಾದ ಮೊರೆ ಹೋಗಬೇಕಿತ್ತು.
ಆದರೆ ಈ ಉಪಕರಣವನ್ನು ಕೇಂದ್ರ ಸರ್ಕಾರ, ಸ್ಥಳೀಯ ಖಾಸಗಿ ಕಂಪನಿಗಳ ಜತೆಗೂಡಿ ತಯಾರಿಸಿದೆ. ಇದರ ನೇತೃತ್ವ ವಹಿಸಿರುವವರು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ. ಇದರ ತಯಾರಿ ಭಾರತದಲ್ಲಿಯೇ ಆಗಿದೆ ಎನ್ನುವುದಕ್ಕಿಂತಲೂ ಮುಖ್ಯವಾದ ಇನ್ನೊಂದು ವಿಷಯ ಎಂದರೆ, 10ನೇ ದಿನಗಳಲ್ಲಿ ಇದರ ತಯಾರಿಸಿದೆ. ಅಷ್ಟೇ ಅಲ್ಲದೇ, ಚೀನಾದಿಂದ ಆಮದು ಮಾಡಿಕೊಳ್ಳುವಾಗ ಎಷ್ಟು ವೆಚ್ಚ ತಗುಲಿತ್ತಿತ್ತೋ ಅದಕ್ಕಿಂತಲೂ ಶೇ. 10ರಷ್ಟು ವೆಚ್ಚದಲ್ಲಿ ಇದರ ತಯಾರಿ ಆಗಿದೆ!
ಚೀನೀ ಸ್ವ್ಯಾಬ್‌ಗಳಿಗೆ 17 ರೂ. ವೆಚ್ಚವಾಗುತ್ತಿದೆ. ಆದರೆ ಭಾರತದ ವೆಚ್ಚ ಕೇವಲ 2 ರೂಪಾಯಿ!
ಸ್ವದೇಶಿ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಮತ್ತು ಜಾನ್ಸನ್ ಮತ್ತು ಜಾನ್ಸನ್ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಟೆಕ್ಸ್ಟೈಲ್ ಸಚಿವಾಲಯದೊಂದಿಗೆ ಸಾಮಾಜಿಕ ಒಪ್ಪಂದದ ಭಾಗವಾಗಿ ಇದನ್ನು ತಯಾರಿಸಿದ್ದಾರೆ.
ಏನಿದು ಸಾಧನ?: ಕರೊನಾ ವೈರಸ್ ಮನುಷ್ಯನ ದೇಹದೊಳಕ್ಕೆ ಹೊಕ್ಕಿರುವುದು ಖಚಿತವಾಗಬೇಕಾದರೆ ವ್ಯಕ್ತಿಯ ಮೂಗಿನ ಮತ್ತು ಗಂಟಲಿನ ದ್ರವದ ಪರೀಕ್ಷೆ (ಸ್ವ್ಯಾಬ್ ಟೆಸ್ಟ್) ಮಾಡಬೇಕಾಗುತ್ತದೆ. ಈ ಉಪಕರಣಕ್ಕೆ ಬಹುತೇಕ ಎಲ್ಲಾ ದೇಶಗಳು ಚೀನಾವನ್ನೇ ಅವಲಂಬಿಸಿವೆ. ಇದೀಗ ಭಾರತ ಒಂದು ಹೆಜ್ಜೆ ಮುಂದೆ ಹೋಗುವ ಜತೆಗೆ, ಇಡೀ ವಿಶ್ವ ಭಾರತದತ್ತ ಮುಖ ಮಾಡುವಂತೆ ಮಾಡಿದೆ.
ಜಾನ್ಸನ್ ಮತ್ತು ಜಾನ್ಸನ್ ಮೆಡಿಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಮಕ್ಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಈ ಉಪಕರಣವನ್ನು ವಿನ್ಯಾಸ ಮಾಡಲು ರಿಲಯನ್ಸ್ ಕಚ್ಚಾ ವಸ್ತುಗಳನ್ನು ಒದಗಿಸಿದೆ ಜಾನ್ಸನ್ ಮತ್ತು ಜಾನ್ಸನ್ ಇಂಡಿಯಾ ಪರೀಕ್ಷಾ ಸ್ವ್ಯಾಬ್‌ಗಳ ತಯಾರಿಕೆಗಾಗಿ ಅಗತ್ಯ ಇರುವ ವೈಜ್ಞಾನಿಕ ಪರಿಣತರನ್ನು ಒದಗಿಸಿದೆ. ಇದೊಂದು ಭಾರತದ ಮೈಲಿಗಲ್ಲು ಎಂದಿದ್ದಾರೆ.
ಜವಳಿ ಸಚಿವ ಸ್ಮೃತಿ ಇರಾನಿ ಅವರು ಟ್ವೀಟ್ ಮಾಡುವ ಮೂಲಕ, ಭಾರತವು ಎಲ್ಲಾ ರೀತಿಯ ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪಿಪಿಇ ಮತ್ತು ಟೆಸ್ಟಿಂಗ್ ಸ್ವ್ಯಾಬ್‌ಗಳ ಉತ್ಪಾದನೆಯಲ್ಲಿ ಭಾರತದ ಯಶಸ್ಸು ಈಗಾಗಲೇ ನಮ್ಮ ರಾಷ್ಟ್ರವನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸಿದೆ. ಈ ಸ್ವ್ಯಾಬ್ ತಯಾರಿಗೆ ಕಂಪನಿಗಳು ಹಗಲಿರುಳು ಶ್ರಮಿಸಿವೆ ಎಂದಿದ್ದಾರೆ. (ಏಜೆನ್ಸೀಸ್)