ಮೆಸ್ಕಾಂ ನಿರ್ಲಕ್ಷೃಕ್ಕೆ ಇನ್ನೆಷ್ಟು ಬಲಿ ಬೇಕು?

mescom
ಹುಲಿಕಲ್-ಬ್ಯಾಕೋಡು ಮಾರ್ಗದ ಬೈಸೆ ಬಳಿ ನಿರ್ವಹಣಾ ಮಾರ್ಗದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು.
Published on

ಹೊಸನಗರ: ವಿದ್ಯುತ್ ಲೈನ್ ನಿರ್ವಹಣೆ ವೇಳೆ ಲೈನ್‌ಮನ್ ಬಲಿ, ಕಾರ್ಮಿಕ ಸಾವು ಎಂಬ ಸುದ್ದಿಗಳು ಮಾಮೂಲಿಯಾಗಿವೆ. ಹೊಸನಗರ ವ್ಯಾಪ್ತಿಯಲ್ಲೇ 5 ವರ್ಷದಲ್ಲಿ ಮೂವರು ಮೃತಪಟ್ಟಿದ್ದಾರೆ. ಆದರೆ ಇದಕ್ಕೆ ಹೊಣೆ ಯಾರು? ಕಾರ್ಮಿಕರ ಕುಟುಂಬದ ನೋವು ಕೇಳುವವರು ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಹೌದು. ವಿದ್ಯುತ್ ಲೈನ್ ನಿರ್ವಹಣೆ ನಡೆಯುತ್ತಿರುವ ಸಂದರ್ಭದಲ್ಲೇ ನಡೆಯುತ್ತಿರುವ ದುರ್ಘಟನೆಗಳ ಸರಮಾಲೆ ಇದು. ಎರಡು ದಿನದ ಹಿಂದೆ ಹೊಸನಗರ ಮೆಸ್ಕಾಂ ವ್ಯಾಪ್ತಿ ನಗರದ ಬೈಸೆ ಸಮೀಪ ವಿದ್ಯುತ್ ಲೈನ್ ನಿರ್ವಹಣೆ ವೇಳೆ ಇದ್ದಕ್ಕಿದ್ದಂತೆ ಆಫ್ ಆಗಿದ್ದ ಲೈನ್ ಚಾರ್ಜ್ ಆದ ಪರಿಣಾಮ ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಕಾರ್ಮಿಕ ವಾಸು ಪೂಜಾರಿ ಹೊಸನಗರ ಕ್ರಿಶ್ಚಿಯನ್ ಕಾಲನಿ ನಿವಾಸಿಯಾಗಿದ್ದು, ವಿದ್ಯುತ್ ಶಾಕ್‌ನಿಂದ ದೇಹ ಬಹುಪಾಲು ಸುಟ್ಟು ಹೋಗಿದೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಸೆ ಸಮೀಪ ವಿದ್ಯುತ್ ಲೈನ್‌ಗೆ ತಾಗಿದ ಮರದ ಕವಲುಗಳ ತೆರವುಗೊಳಿಸುವ ಮುಂಚಿತವಾಗಿ ಹುಲಿಕಲ್-ಬ್ಯಾಕೋಡು ವಿದ್ಯುತ್ ಲೈನ್‌ನ ಎಲ್.ಸಿ. ಪಡೆದುಕೊಳ್ಳಲಾಗಿತ್ತು. ಅಲ್ಲದೆ ಸ್ಥಳದಲ್ಲೇ ಬ್ಯಾಕೋಡು ಇಂಜಿನಿಯರ್ ಗಣೇಶ್, ಮೇಸ್ತ್ರಿ ವಿಜಯಕುಮಾರ್ ಸಹ ಮೊಕ್ಕಾಂ ಹೂಡಿದ್ದರು. ಈ ನಡುವೆ ಏಕಾಏಕಿ ಲೈನ್ ಚಾರ್ಜ್ ಆಗಿದ್ದರಿಂದ ಅವಘಡ ನಡೆದಿದೆ. ಇದಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.
ಹೊಸನಗರದಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ. 5 ವರ್ಷದಲ್ಲಿ ಮೂರು ಜೀವಗಳು ಹಾರಿಹೋಗಿವೆ. ಕರಿನಗೊಳ್ಳಿ, ಮಾರುತಿಪುರದಲ್ಲಿ ಅಧಿಕಾರಿಗಳ ನಿರ್ಲಕ್ಷೃದಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಇನ್ನೊಂದು ಪ್ರಕರಣದಲ್ಲಿ ಲೈನ್‌ಮನ್ ರತನ್ ಜೀವ ತೆತ್ತಿದ್ದರು. ಹೀಗೆ ಕಾರ್ಮಿಕರು ಬಲಿಯಾಗುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಮೆಸ್ಕಾಂ ವಿಫಲವಾಗುತ್ತಿದೆ ಎಂಬುದು ಕಾರ್ಮಿಕರ ಆರೋಪ.
ವಿದ್ಯುತ್ ಲೈನ್ ನಿರ್ವಹಣೆ ವೇಳೆ ಆಯಾ ಸೆಕ್ಷನ್‌ನಿಂದ ಲೈನ್ ಕ್ಲಿಯರೆನ್ಸ್ ಪಡೆದುಕೊಂಡು ಕೋಡ್‌ವರ್ಡ್ ನೀಡಬೇಕು. ಅಲ್ಲದೆ ಸೆಕ್ಷನ್ ಅಧಿಕಾರಿ, ಇಂಜಿನಿಯರ್, ಲೈನ್‌ಮನ್, ಮೇಸ್ತ್ರಿ ಸ್ಥಳದಲ್ಲಿ ಇರಬೇಕು. ಲೈನ್‌ಮನ್ ವಿದ್ಯುತ್ ಕಂಬ ಹತ್ತಿ ಅರ್ಥಿಂಗ್ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ದೃಢೀಕರಣ ನೀಡಿದ ನಂತರ ಕೆಲಸ ಆರಂಭಿಸಬೇಕು. ಈ ಬಗ್ಗೆ ನಿರ್ಲಕ್ಷೃ ಮಾಡಿದರೆ ಇಂತಹ ಅವಘಡಗಳು ನಡೆಯುತ್ತವೆ. ಬ್ಯಾಕೋಡು ಲೈನ್ ದುರಂತ ಪ್ರಕರಣದಲ್ಲಿ ಲೈನ್ ಚಾರ್ಜ್ ಮಾಡಿದ್ದು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಮೆಸ್ಕಾಂ ಸಿಬ್ಬಂದಿ ಗಾಯಗೊಂಡರೆ ಚಿಕಿತ್ಸಾ ವೆಚ್ಚ, ಅಸುನೀಗಿದರೆ ಪರಿಹಾರ, ಅನುಕಂಪ ಆಧಾರಿತ ಉದ್ಯೋಗ ಸಿಗುತ್ತದೆ. ಆದರೆ ಕಾರ್ಮಿಕರ ಸ್ಥಿತಿ ಅಯೋಮಯ. ಭದ್ರತೆ, ಉದ್ಯೋಗ, ಪರಿಹಾರದ ಮಾತೇ ಇಲ್ಲ. ನಯಾಪೈಸೆಯೂ ದೊರಕುವುದಿಲ್ಲ. ಗುತ್ತಿಗೆದಾರರ ಅಡಿ ಕಾರ್ಯನಿರ್ವಹಿಸುವ ಕಾರ್ಮಿಕರ ಕುಟುಂಬಕ್ಕೆ ಗುತ್ತಿಗೆದಾರರೇ ಗತಿ ಎಂಬಂತಾಗಿದೆ.
ಇಲಾಖೆಯೇ ಹೊಣೆ: ಹೊಸನಗರ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ಗುತ್ತಿಗೆದಾರ ನೀಡುವ ದಿನಗೂಲಿ ಸಂಬಳ ಬಿಟ್ಟರೆ ಬೇರ‌್ಯಾವುದೇ ಸೌಲಭ್ಯವಿಲ್ಲ. ಹೊರಗುತ್ತಿಗೆ ಕಾಮಗಾರಿ ಆದ ಕಾರಣ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ಕಾರ್ಮಿಕರು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದರೂ ಇಲಾಖೆ ನಿರ್ಲಕ್ಷೃವೇ ಅವಘಡಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಇಲಾಖೆಯೇ ಹೊಣೆ. ಇತ್ತೀಚಿನ ಘಟನೆಗಳಲ್ಲಿ ಇಲಾಖೆ ಸಿಬ್ಬಂದಿ ನಿರ್ಲಕ್ಷೃವೇ ಕಾರಣ. ಇದಕ್ಕೆ ಪರಿಹಾರ ಕೂಡ ನೀಡುವುದು ಇಲಾಖೆ ಜವಾಬ್ದಾರಿ. ಇದರಿಂದ ಇಲಾಖೆ ನುಣುಚಿಕೊಳ್ಳಬಾರದು ಎಂಬುದು ನೊಂದ ಕಾರ್ಮಿಕರ ಒತ್ತಾಯ.
ಬೈಸೆ ಸಮೀಪದಲ್ಲಿ ನಡೆಯುತ್ತಿದ್ದ ವಿದ್ಯುತ್ ಸಂಪರ್ಕ ನಿರ್ವಹಣೆ ವೇಳೆ ಉಂಟಾದ ಅವಘಡದಲ್ಲಿ ಕಾರ್ಮಿಕ ಗಂಭೀರ ಗಾಯಗೊಂಡಿದ್ದು, ಇದಕ್ಕೆ ಇಲಾಖೆಯೇ ನೇರ ಹೊಣೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ವಿದ್ಯುತ್ ಗುತ್ತಿಗೆದಾರ ಸತೀಶ ಬಾವಿಕಟ್ಟೆ ಅವರ ಒತ್ತಾಯ
ಈಗಾಗಲೇ ಘಟನೆ ಬಗ್ಗೆ ಪ್ರಥಮ ಮಾಹಿತಿ ಪಡೆದುಕೊಳ್ಳಲಾಗಿದೆ. ಹುಲಿಕಲ್-ಬ್ಯಾಕೋಡು ಮಾರ್ಗದ ಬೈಸೆ ಸಮೀಪ ನಡೆದ ವಿದ್ಯುತ್ ಅವಘಡದ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಜೋಗ ವಿಭಾಗದ ಎಇಇ ಪ್ರವೀಣ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net