

ರವಿ ಗೋಸಾವಿ ಬೆಳಗಾವಿ
ರಾಜ್ಯದ ಎರಡನೇ ರಾಜ್ಯಧಾನಿ ಹಾಗೂ ಬಹುದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿನ 18 ವಿಧಾನಸಭಾ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಅಲ್ಲದೆ, ಗೆದ್ದ ಅಭ್ಯರ್ಥಿಗಳು ಎರಡ್ಮೂರು ತಂಡವಾಗಿ ಶಾಸಕಾಂಗ ಸಭೆಗೆ ತೆರಳಿದರೆ, ಸತೀಶ ಜಾರಕಿಹೊಳಿ, ಮಹಾಂತೇಶ ಕೌಜಲಗಿ ಶನಿವಾರವೇ ಬೆಂಗಳೂರಿಗೆ ಹೋಗಿದ್ದಾರೆ. ನಿರೀಕ್ಷೆಯಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ಆಪ್ತಬಳಗ ಎಂದು ಅಶೋಕ ಪಟ್ಟಣ, ಪ್ರಕಾಶ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಮೂಲಕ ಮಹತ್ವದ ಖಾತೆಗೆ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಒಂದೊಮ್ಮೆ ಪ್ರಮುಖ ಜಲಸಂಪನ್ಮೂಲ ಖಾತೆ ಸೇರಿ ನಾಲ್ವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಬೆಳಗಾವಿಗೆ ಆದ್ಯತೆ ನೀಡಿತ್ತು. ಬೆಳಗಾವಿ ವರ್ಚಸ್ಸು ಸಂಪುಟದಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಕರುನಾಡಿನ ಗಡಿ, ಬಿಜೆಪಿಯ ಭದ್ರಕೋಟೆ ಎಂಬಂತೆ ಬದಲಾಗಿದ್ದ ಬೆಳಗಾವಿಯಲ್ಲಿ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಕೇಸರಿ ಪಾಳಯದ ಕೋಟೆ ಕೈ ವಶ ಪಡೆದಿರುವ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಖಚಿತವಾಗಿದ್ದು, ಸರ್ಕಾರದ ಪ್ರಮುಖ ಖಾತೆಯೋ? ಜಿಲ್ಲಾ ಉಸ್ತುವಾರಿಯೋ ಎನ್ನುವುದು ಅವರ ಆಯ್ಕೆಗೆ ಬಿಟ್ಟಿದ್ದು ಎಂಬ ಚರ್ಚೆ ಪಕ್ಷದಲ್ಲಿದೆ.
ಇನ್ನು ಸತೀಶ ಅವರ ಸಹೋದರ ರಮೇಶ ಜಾರಕಿಹೊಳಿ ವಿರುದ್ಧ ಜಿದ್ದಾಜಿದ್ದಿನಿಂದ ಗೆದ್ದಿರುವ ಲಕ್ಷ್ಮೀ ಹೆಬ್ಬಾಳ್ಕರ್‌ಗೂ ಮಹಿಳಾ ಹಾಗೂ ಲಿಂಗಾಯತ ಕೋಟಾದಡಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಸಚಿವ ಸ್ಥಾನ ದಕ್ಕುವ ಸಾಧ್ಯತೆ ಇದ್ದು, ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಟ್ಟು ಬೇರಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರ್ಪಡೆಗೊಂಡ ಲಕ್ಷ್ಮಣ ಸವದಿ ಅವರೂ ಸಚಿವ ಸ್ಥಾನ ಕೊಟ್ಟರೆ ಬೇಡ ಎನ್ನುವುದಿಲ್ಲ ಎಂಬಂತಿದೆ.
ಕಳೆದ ಬಾರಿಗಿಂತಲೂ ವಿಸ್ತರಿಸಿಕೊಂಡ 6 ಕ್ಷೇತ್ರಗಳಿಂದ ಬಹುಪಾಲು ಹಿರಿಯರು ಹಾಗೂ ಈ ಹಿಂದೆ ಮೂರ‌್ನಾಲ್ಕು ಬಾರಿ ಆಯ್ಕೆಯಾದವರೇ ಈ ಬಾರಿಯ ಶಾಸಕಾಂಗ ಸೇರಿರುವುದು ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿಸಲು ಕಾರಣವಾಗಿದೆ. ಅಲ್ಲದೆ, ಕಾಂಗ್ರೆಸ್‌ನಿಂದ ಒಂದು ಬಾರಿ ವಿಧಾನ ಪರಿಷತ್ ಹಾಗೂ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಮಹಾಂತೇಶ ಕೌಜಲಗಿ ಜತಗೆ ಸಿದ್ದರಾಮಯ್ಯ ಆಪ್ತ ಅಶೋಕ ಪಟ್ಟಣ ಅವರೂ ಸಂಪುಟ ಸೇರಲು ಉತ್ಸುಕರಾಗಿರುವ ಕುರಿತು ತಿಳಿದು ಬಂದಿದೆ.
ಪಕ್ಷಕ್ಕಾಗಿ ಸಚಿವ ಸ್ಥಾನ ತ್ಯಾಗ ಮಾಡಿದ್ದ ಹುಕ್ಕೇರಿ!
ಲೋಕಸಭೆ ಚುನಾವಣೆಯಲ್ಲಿ ರಮೇಶ ಕತ್ತಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ್ದರಿಂದ ಪಕ್ಷದ ಪ್ರತಿಷ್ಠೆಗಾಗಿ 2014ರ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಮುಜರಾಯಿ ಖಾತೆಗಳ ಸಚಿವ ಸ್ಥಾನ ಬಿಟ್ಟುಕೊಟ್ಟು ಸ್ಪರ್ಧಿಸಿ ಲೋಕಸಭೆಗೆ ತೆರಳಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ತ್ಯಾಗ ಈ ಬಾರಿ ಫಲಕೊಡಲಿದೆ ಎಂಬ ನಿರೀಕ್ಷೆಯಿದೆ.
ಸತತ ಐದು ಬಾರಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಹಿರಿಯರಾದ ಪ್ರಕಾಶ ಹುಕ್ಕೇರಿ ಹಾಗೂ 2014ರ ಉಪಚುನಾವಣೆಯಿಂದ ಈ ವರೆಗೆ ಸತತ ಮೂರನೇ ಬಾರಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿರುವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಅವರಿಗೆ ಯುವ ಸಂಪುಟದಲ್ಲಾದರೂ ವರಿಷ್ಠರು ಕೈ ಹಿಡಿಯುತ್ತಾರಾ? ಎಂದು ಚಿಕ್ಕೋಡಿ-ಸದಲಗಾ ಕ್ಷೇತ್ರ ಎದುರು ನೋಡುತ್ತಿದೆ.
ಏಳು ಜನ ಲಿಂಗಾಯತ ಶಾಸಕರು
ರಾಜ್ಯದಲ್ಲಿ ಲಿಂಗಾಯತರನ್ನು ಹತ್ತಿಕ್ಕಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಭುಗಿಲೆದ್ದ ಸಮುದಾಯದ ಆಕ್ರೋಶವನ್ನು ಮುಂದಿನ ಚುನಾವಣೆವರೆಗೂ ಪೋಷಿಸುವುದಕ್ಕಾಗದರೂ ಹೆಚ್ಚಿನ ಸಂಖ್ಯೆಯ ಲಿಂಗಾಯತರಿಗೆ ಸಂಪುಟದಲ್ಲಿ ಮಣೆ ಹಾಕುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿಯೇ ಬೆಳಗಾವಿಯ 11 ಶಾಸಕರಲ್ಲಿ 7 ಜನ ಲಿಂಗಾಯತರೇ ಆಗಿರುವುದು ಮೂರು ಮತ್ತು ನಾಲ್ಕು ಸಚಿವ ಸ್ಥಾನಗಳ ನಿರೀಕ್ಷೆಗೆ ಬಲ ತಂದಿದೆ. ಅಲ್ಲದೆ, ಸಚಿವ ಸ್ಥಾನಗಳನ್ನೂ ಹೊರತುಪಡಿಸಿ ಮಹತ್ವದ ಕನಿಷ್ಠ ಎರಡಾದರೂ ನಿಗಮ ಮಂಡಳಿಗಳ ಜವಾಬ್ದಾರಿ ಜಿಲ್ಲೆಯ ಶಾಸಕರಿಗೆ ಸಿಗಲಿದೆ.
ಬೆಳಗಾವಿ ದೊಡ್ಡ ಜಿಲ್ಲೆ. ಎರಡನೇ ರಾಜಧಾನಿಯಾಗಿಯೂ ಯಾವತ್ತಿದ್ದರೂ ಪವರ್ ಸೆಂಟರ್. ಖಂಡಿತವಾಗಿ ನಮಗೆ ಹೆಚ್ಚಿನ ಸ್ಥಾನ ಸಿಗಲಿದೆ. 135ರಲ್ಲಿ ಬೆಳಗಾವಿ ಜಿಲ್ಲೆಯೊಂದರಿಂದಲೇ 11 ಜನ ಹೋಗುತ್ತಿರೋದು ಜಿಲ್ಲೆಯ ಸ್ವಾಭಿಮಾನ ಪ್ರತೀಕ. ಬಹಳ ಧೈರ್ಯದಿಂದ ಸಿಎಲ್ಪಿ ಸಭೆಯಲ್ಲಿ ಮುಖ ಎತ್ತಿ ಮಾತನಾಡುತ್ತೇವೆ. ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಶಾಸಕಿ
ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಶಾಸಕಿ
ಶಾಸಕರಾದ ಬಳಿಕವೇ ಮಂತ್ರಿ, ಡಿಸಿಎಂ ಹಾಗೂ ಸಿಎಂ ಆಗಲೇಬೇಕು ಎಂದೇನಿಲ್ಲ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಹೆಚ್ಚಿನ ಸ್ಥಾನ ಪಡೆದ ಬೆಳಗಾವಿಯ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಲಕ್ಷ್ಮಣ ಸವದಿ, ಮಾಜಿ ಡಿಸಿಎಂ
ಲಕ್ಷ್ಮಣ ಸವದಿ, ಮಾಜಿ ಡಿಸಿಎಂ