

ಲಖನೌ: ಉತ್ತರ ಪ್ರದೇಶದ ಲಕ್ಷಾಂತರ ಕಾರ್ಮಿಕರು ದೇಶದ ತುಂಬೆಲ್ಲ ದುಡಿಯುತ್ತಿದ್ದಾರೆ. ಅವಕಾಶ, ಹೆಚ್ಚು ಕೂಲಿ ಸಿಗುವೆಡೆಗೆ ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಿದ್ದ ಅವರೆಲ್ಲರೂ ಕೋವಿಡ್ 19 ಲಾಕ್ಡೌನ್ನಿಂದಾಗಿ ತವರು ರಾಜ್ಯಕ್ಕೆ ಮರಳುತ್ತಿದ್ದಾರೆ.
ಉತ್ತರ ಪ್ರದೇಶದ ಗೃಹ ಖಾತೆಯ ಅಪರ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ತಿ ಅವರ ಪ್ರಕಾರ ಶುಕ್ರವಾರದವರೆಗೆ 15 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಿದ್ದರು. ಆದರೆ, ಶನಿವಾರ ಒಂದೇ ದಿನ 1.5 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಿದ್ದು ಇದುವರೆಗೆ ಮರಳಿದ ವಲಸೆ ಕಾರ್ಮಿಕರ ಸಂಖ್ಯೆ 16.5 ಲಕ್ಷಕ್ಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚೆಚ್ಚು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳುತ್ತಿರುವುದರಿಂದ, ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಾಗುವ ಬಗ್ಗೆ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬರದಂತೆ ತಡೆಯಲು ಉತ್ತರ ಪ್ರದೇಶ ಸರ್ಕಾರ ಪ್ರಯತ್ನಿಸುತ್ತಿರುವುದಾಗಿ ಹೇಳಲಾಗಿದೆ.