ಲಾಲು ಪ್ರಸಾದ್​ ಯಾದವ್​ಗೆ ಮೊಬೈಲ್​ಫೋನ್​ ಸಿಕ್ಕಿದ್ದು ಹೇಗೆ?

lalu prasad
Published on

ರಾಂಚಿ: ಜೈಲುಪಾಲಾಗಿದ್ದರೂ ಅಲ್ಲಿಂದಲೇ ಮೊಬೈಲ್​ಫೋನ್​ ಮೂಲಕ ಕರೆ ಮಾಡಿ ಬಿಹಾರದ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ, ಸರ್ಕಾರ ಬೀಳಿಸಲು ಲಾಲು ಪ್ರಸಾದ್​ ಯಾದವ್ ಪ್ರಯತ್ನಿಸುವ ಕುರಿತು ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಲೇ ಇದೆ. ಈ ಬಗ್ಗೆ ಬಿಹಾರದ ಮಾಜಿ ಸಿಎಂ ಸುಶೀಲ್​ ಕುಮಾರ್ ಮೋದಿ ಬಹಿರಂಗವಾಗಿಯೇ ಟೀಕೆ ಮಾಡಿದ್ದರು.

ಲಾಲು ಪ್ರಸಾದ್ ಯಾದವ್ ಬಿಹಾರದ ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನದ ಆಮಿಷವೊಡ್ಡಿರುವುದನ್ನು ಆ ನಂಬರ್ ಸಮೇತ ಸುಶೀಲ್​ಕುಮಾರ್ ಮೋದಿ ಬಹಿರಂಗಪಡಿಸಿದ್ದರು. ಮಾತ್ರವಲ್ಲ ತಾವು ಲಾಲುಗೆ ಖುದ್ದಾಗಿ ಕರೆ ಮಾಡಿ, 'ಜೈಲ್​ನಲ್ಲಿದ್ದುಕೊಂಡು ಇಂಥ ಪ್ರಯತ್ನ ಮಾಡಬೇಡಿ, ಯಶಸ್ವಿಯಾಗುವುದಿಲ್ಲ' ಎಂದಿರುವುದನ್ನೂ ಸುಶೀಲ್​ ಕುಮಾರ್ ಮೋದಿ ಹೇಳಿಕೊಂಡಿದ್ದರು.

ಕೈದಿಯಾಗಿರುವ ಲಾಲು ಪ್ರಸಾದ್ ಯಾದವ್ ಜೈಲ್​ನಲ್ಲಿ ಮೊಬೈಲ್​ಫೋನ್​ ಬಳಸಿರುವ ಬಗ್ಗೆ ತನಿಖೆಗೆ ಆದೇಶವಾಗಿದೆ. ಲಾಲುಗೆ ಮೊಬೈಲ್​ಫೋನ್​ ಹೇಗೆ ಸಿಕ್ಕಿತು? ಎಂಬ ಬಗ್ಗೆ ತನಿಖೆ ನಡೆಸುವಂತೆ ಜಾರ್ಖಂಡ್​ನ ಜೈಲ್​ ಐಜಿ ಬೀರೇಂದ್ರ ಭೂಷಣ್​ ಅವರು ರಾಂಚಿಯ ಡೆಪ್ಯುಟಿ ಕಮಿಷನರ್​​ಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ 24 ಗಂಟೆಗಳಲ್ಲಿ ಆ ಬಗ್ಗೆ ವರದಿ ಸಲ್ಲಿಸುವಂತೆ ಜೈಲ್​ ಸೂಪರಿಂಟೆಂಡೆಂಟ್​​ಗೆ ಡಿಸಿ ಆದೇಶಿಸಿದ್ದಾರೆ.

ಲಾಲು ಮೇವು ಹಗರಣ ಹಿನ್ನೆಲೆಯಲ್ಲಿ 14 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಅವರನ್ನು ರಾಂಚಿಯ ರಾಜೇಂದ್ರ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಸೈನ್ಸಸ್​ಗೆ ದಾಖಲಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಂದ ಆರ್​ಐಎಂಎಸ್​ ನಿರ್ದೇಶಕರ ಬಂಗಲೆಗೆ ಸ್ಥಳಾಂತರಿಸಲಾಗಿದೆ. 26 ತಿಂಗಳಿನಿಂದ ಲಾಲು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಅವರನ್ನು ವಾರ್ಡ್​ಗೆ ಶಿಫ್ಟ್​ ಮಾಡುವಂತೆ ರಿಮ್ಸ್ ಆಡಳಿತ ಸೂಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net