

ದೇಶದ ಹನ್ನೆರಡು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು 2022-23 ರ ಹಣಕಾಸು ವರ್ಷದಲ್ಲಿ ಒಟ್ಟು 1,04,649 ಕೋಟಿ ರೂಪಾಯಿ ಲಾಭ ಗಳಿಸಿವೆ. 2018ರಲ್ಲಿ 85,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದ ಈ ಬ್ಯಾಂಕುಗಳು ನಾಲ್ಕೇ ವರ್ಷಗಳಲ್ಲಿ ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಿದ್ದು ಹಣಕಾಸು ವಲಯ, ರಿಸರ್ವ್ ಬ್ಯಾಂಕ್ ಮತ್ತು ಅರ್ಥಿಕ ತಜ್ಞರನ್ನು ಚಕಿತಗೊಳಿಸಿದೆ.
ಇದರಲ್ಲಿ ಬ್ಯಾಂಕುಗಳ ಹಿರಿಯಣ್ಣ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ 50,232 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ 59% ಹೆಚ್ಚಳ ತೋರಿಸಿದೆ. ಪುಣೆ ಮೂಲದ ಬ್ಯಾಂಕ್ ಆಫ್ ಮಹಾರಾಷ್ಟ್ರ ಲಾಭದಲ್ಲಿ 126% ಹೆಚ್ಚಾಗಿದ್ದು, 2602 ಕೋಟಿ ರೂ. ಲಾಭ ಗಳಿಸಿದರೆ, ಯುಕೋ ಬ್ಯಾಂಕ್ 100% ಮತ್ತು ಬ್ಯಾಂಕ್ ಆಫ್ ಬರೋಡಾ 94% ಹೆಚ್ಳಳದ ಮೂಲಕ ಕ್ರಮವಾಗಿ 1862 ಮತ್ತು 14,110 ಕೋಟಿ ರೂಪಾಯಿ ಲಾಭ ಗಳಿಸಿವೆ. ಬ್ಯಾಂಕುಗಳು ಗಳಿಸಿದ ಲಾಭದಿಂದ ಸರ್ಕಾರ ಈ ಬಾರಿ 13,800 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಆದಾಯ ಪಡೆದಿದ್ದು, 2022ರಲ್ಲಿ ಇದು 9120 ಕೋಟಿ ರೂ. ಇತ್ತು. 2022ರಲ್ಲಿ ಇಕ್ವಿಟಿ ಡಿವಿಡೆಂಡ್ 13710 ಕೋಟಿ ರೂ. ಇದ್ದರೆ, 2023ರಲ್ಲಿ 21,000 ಕೋಟಿ ರೂ.ಗೆ ಏರಿದೆ. ಬಡ್ಡಿ ಅದಾಯವು 7.09 ಲಕ್ಷ ಕೋಟಿ ರೂಪಾಯಿಯಿಂದ 8. 51 ಲಕ್ಷ ಕೋಟಿ ರೂಪಾಯಿಗೆ ಏರಿದರೆ, ಟ್ರಜರಿ ಅದಾಯ 15.7% ಏರಿ 9.70 ಲಕ್ಷ ಕೋಟಿ ರೂಪಾಯಿ ಅಗಿದೆ. ಅನುತ್ಪಾದಕ ಸಾಲ 9.70%ರಷ್ಟು ಕಡಿಮೆಯಾದರೆ, ಅನುತ್ಪಾದಕ ಸಾಲಕ್ಕೆ ವರ್ಗಾಯಿಸುವ ಮೊತ್ತ ಕಳೆದ 8 ವರ್ಷಗಳಲ್ಲಿ ಅತಿ ಕಡಿಮೆಯಾಗಿದ್ದು 97,000 ಕೋಟಿ ರೂ.ಗೆ ಇಳಿದಿದೆ. ವಿಶೇಷವೆಂದರೆ ಎಲ್ಲಾ ಬ್ಯಾಂಕುಗಳು ನಿವ್ವಳ ಲಾಭದಲ್ಲಿ ಗಮನಾರ್ಹ ಸಾಧನೆ ತೋರಿಸಿವೆ. ಈ ಸಾಧನೆಯು ಹೊಸ ಪೀಳಿಗೆಯ ಖಾಸಗಿ ಬ್ಯಾಂಕುಗಳ ಸೇವಾ ಮಟ್ಟ, ಅವರ ಬಿಜಿನೆಸ್ ಪ್ರಮಾಣ, ಅವು ಗಳಿಸುವ ಲಾಭ, ಅವುಗಳಲ್ಲಿರುವ ಅನುತ್ಪಾದಕ ಸಾಲಗಳ ಮಟ್ಟವನ್ನು ಹೋಲಿಸಿ ಸರ್ಕಾರಿ ಬ್ಯಾಂಕುಗಳ ಸಾಧನೆಯನ್ನು ನಿಕೃಷ್ಟವಾಗಿ ನೋಡುವವರ ಕಣ್ಣು ತೆರೆಸಿದೆ.
ಸುಸ್ತಿ ಸಾಲದ ಮಹಿಮೆ: ಭಾರತದಲ್ಲಿ ಸರ್ಕಾರಿ ಬ್ಯಾಂಕುಗಳು ಲಾಭ ಗಳಿಸುತ್ತಿಲ್ಲ ಅಥವಾ ಅವುಗಳ ಲಾಭ ಪ್ರಮಾಣ ತೃಪ್ತಿದಾಯಕವಿಲ್ಲ ಎನ್ನುವ ತಪ್ಪು ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಬಹುತೇಕ ಸಾರ್ವಜನಿಕ ರಂಗದ ಉದ್ಯಮಗಳು ನಷ್ಟದಲ್ಲಿರುವುದರಿಂದ ಸರ್ಕಾರಿ ಬ್ಯಾಂಕುಗಳನ್ನೂ ಈ ಪಟ್ಟಿಗೆ ಸೇರಿಸಲಾಗುತ್ತದೆ. ವಾಸ್ತವದಲ್ಲಿ ಬಹುತೇಕ ಎಲ್ಲಾ ಸರ್ಕಾರಿ ಬ್ಯಾಂಕುಗಳು ಲಾಭ ಗಳಿಸುತ್ತವೆ. ಅದರೆ, ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಲಾಭದಲ್ಲಿನ ಗಮನಾರ್ಹ ಮೊತ್ತವನ್ನು ಅನುತ್ಪಾದಕ ಅಥವಾ ಸುಸ್ತಿ ಸಾಲ ಸೌಲಭ್ಯದ ಹೆಸರಿನಲ್ಲಿ ವರ್ಗಾಯಿಸಬೇಕಾಗಿರುವುದರಿಂದ ಬ್ಯಾಂಕುಗಳ ಲಾಭದಲ್ಲಿ ಗಮನಾರ್ಹ ಇಳಿಕೆ ಕಾಣುತ್ತದೆ ಅಥವಾ ಬ್ಯಾಂಕುಗಳು ನಷ್ಟವನ್ನು ತೋರಿಸುತ್ತವೆ. ಉದಾಹರಣೆಗೆ 2018-19ರಲ್ಲಿ ಸರ್ಕಾರಿ ಬ್ಯಾಂಕುಗಳು 1.50 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದು, 2.16 ಲಕ್ಷ ಕೋಟಿ ರೂ.ಗಳನ್ನು ಅನುತ್ಪಾದಕ ಅಥವಾ ಸುಸ್ತಿ ಸಾಲಕ್ಕೆ ವರ್ಗಾಯಿಸುವ ಅನಿವಾರ್ಯತೆಯಲ್ಲಿ, ಅವು 66,000 ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ಬ್ಯಾಂಕಿಂಗ್ ಉದ್ಯಮದ ಈ ಅಕೌಂಟಿಂಗ್ ಸಿಸ್ಟಮ್ ತಿಳಿಯದವರು ಬ್ಯಾಂಕುಗಳು ನಷ್ಟದಲ್ಲಿವೆ ಎಂದು ಅವುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
2013 ರಿಂದ 2022 ರವರೆಗೆ ಈ ಅನುತ್ಪಾದಕ ಅಥವಾ ಸುಸ್ತಿ ಸಾಲಕ್ಕೆ ಪೊ›ವಿಜನ್ ಹೆಸರಿನಲ್ಲಿ 27.40 ಲಕ್ಷ ಕೋಟಿ ರೂ. ವರ್ಗಾಯಿಸಲಾಗಿದೆ. 2008-2009ರಿಂದ 2020-21ರವರೆಗೆ ಸರ್ಕಾರಿ ಬ್ಯಾಂಕುಗಳು 15.67 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. ಇದರಲ್ಲಿ 14.42 ಲಕ್ಷ ಕೋಟಿ ರೂ. ಅನುತ್ಪಾದಕ ಸಾಲಕ್ಕೆ ವರ್ಗಾಯಿಸಲ್ಪಟ್ಟಿದ್ದು 1.55 ಲಕ್ಷ ಕೋಟಿ ರೂ. ನಿವ್ವಳ ಲಾಭ ಎನ್ನಲಾಗುತ್ತಿದೆ. ಸರ್ಕಾರಿ ಬ್ಯಾಂಕುಗಳು 2020-21ರಲ್ಲಿ 31,816 ಕೋಟಿ ರೂ. ಲಾಭ ಗಳಿಸಿದ್ದರೆ, 2021-22 ರಲ್ಲಿ 66,539 ಕೋಟಿ ರೂ. ಲಾಭ ಗಳಿಸಿವೆ. ಈ ರೀತಿ ಲಾಭದ ಬಹುಭಾಗವನ್ನು ಅನುತ್ಪಾದಕ ಸಾಲಕ್ಕೆ ವರ್ಗಾಯಿಸಿದ್ದರಿಂದ 2018ರಲ್ಲಿ 14% ಇದ್ದ ಅನುತ್ಪಾದಕ ಅಸ್ತಿ 2022 ರಲ್ಲಿ 5.30%ಗೆ ಇಳಿದಿದೆ. ಅನುತ್ಪಾದಕ ಅಸ್ತಿಯ ಇಳಿಕೆಯಿಂದಾಗಿ ಬ್ಯಾಂಕುಗಳ ನಿವ್ವಳ ಲಾಭದಲ್ಲಿ ಏರಿಕೆ ಕಂಡು ಬಂದಿದೆ.
ಲಾಭಕ್ಕೆ ಹಲವು ಕಾರಣ: ಬ್ಯಾಂಕುಗಳ ಚೇತರಿಕೆಯ ಹಿಂದಿನ ಕಾರಣಗಳ ಬಗೆಗೆ ಸಾಕಷ್ಟು ಜಿಜ್ಞಾಸೆಗಳಿವೆ. ಅರ್ಥಿಕ ವ್ಯವಸ್ಥೆಯಲ್ಲಿ ನಗದು ವ್ಯವಹಾರ ಕಡಿಮೆಯಾಗಿದ್ದು, ಡಿಜಿಟಲ್ ಮೋಡ್ ಮೂಲಕ ವ್ಯವಹಾರಗಳು ಬ್ಯಾಂಕಿಗೆ ಹರಿದು ಬರುತ್ತಿದ್ದು, ಬ್ಯಾಂಕುಗಳಲ್ಲಿ ಜನಸಂದಣಿ ಕಡಿಮೆಯಾದರೂ ವ್ಯವಹಾರಕ್ಕೆ ಚ್ಯುತಿಯಾಗಿಲ್ಲ. ಇಂದು ರಸ್ತೆಯಲ್ಲಿ ತರಕಾರಿ ಮಾರುವವರು, ಪಾನಿ ಪೂರಿಯವರು, ಟೀ ಅಂಗಡಿಯವರಿಂದ ಹಿಡಿದು ಬಹುತೇಕ ಸಣ್ಣ ಪ್ರಮಾಣದ ಬಿಜಿನೆಸ್ ಮೊತ್ತಗಳು ಕ್ಯೂಆರ್ ಕೋಡ್ ಮೂಲಕ ಬ್ಯಾಂಕಿಗೆ ಹರಿದು ಬರುತ್ತಿವೆ. ಅಲ್ಪಾವಧಿಗಾದರೂ ಬ್ಯಾಂಕುಗಳಲ್ಲಿ ಠೇವಣಿ ಹೆಚ್ಚುತ್ತಿದೆ. ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ನಿರ್ವಹಣಾ ವೆಚ್ಚದಲ್ಲಿ ಭಾರಿ ಕಡಿತ, ಸಿಬ್ಬಂದಿ ನೇಮಕಾತಿಯಲ್ಲಿ ವಿಳಂಬ, ನಿವೃತ್ತರಾದವರ ಸ್ಥಾನಕ್ಕೂ ನೇಮಕಾತಿಯಲ್ಲಿ ಮೀನಮೇಷ ಇವು ಸರ್ಕಾರಿ ಬ್ಯಾಂಕುಗಳು ಹೆಚ್ಚು ಲಾಭ ಗಳಿಸುವಲ್ಲಿ ಕೊಡುಗೆ ನೀಡಿವೆ ಎನ್ನಲಾಗುತ್ತದೆ. ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮಾಡದೆ ಹಿಂದೇಟು ಹಾಕುತ್ತಿರುವುದು, ಸಾಲದ ಮೇಲಿನ ಬಡ್ಡಿದರಲ್ಲಿ ಏರುಮುಖ ಮತ್ತು ಬಡ್ಡಿಯೇತರ ಅದಾಯದಲ್ಲಿ ಗಮನಾರ್ಹವಾದ ಏರಿಕೆಯೂ ಬ್ಯಾಂಕುಗಳ ಲಾಭವನ್ನು ಹೆಚ್ಚಿಸುವಲ್ಲಿ ಸಹಾಯ ನೀಡಿವೆ ಎನ್ನಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕ್ ಸೇವಾ ಶುಲ್ಕ ವನ್ನು ಪರಿಷ್ಕರಿಸಲಾಗಿದ್ದು ಕೂಡ ಬ್ಯಾಂಕುಗಳ ಲಾಭ ಹೆಚ್ಚಳದಲ್ಲಿ ಗಮನಿಸುವ ಅಂಶ ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ಶಾಖಾ ವಿಸ್ತರಣೆ ಬಹುತೇಕ ನಿಂತು ಹೋಗಿದೆ. ಅಂತೆಯೇ ಹೊಸ ಶಾಖೆಗಳು ಸ್ಥಿರಗೊಳ್ಳುವವರೆಗೂ ವೆಚ್ಚದಲ್ಲಿ ಗಮನಾರ್ಹ ಕಡಿತವಾಗುತ್ತಿದೆ. ಬ್ಯಾಂಕುಗಳ ಲಾಭದಲ್ಲಿ ಹೆಚ್ಚಳಕ್ಕೆ ಇನ್ನೊಂದು ಮುಖ್ಯ ಕಾರಣ ಸುಸ್ತಿ ಸಾಲಗಳ ರೈಟ್ ಆಫ್ ಅಥವಾ ಬರ್ಖಾಸ್ತು. ಕಳೆದ 5 ವರ್ಷಗಳ ಅವಧಿಯಲ್ಲಿ 10.08 ಲಕ್ಷ ಕೋಟಿ ರೂ. ಸುಸ್ತಿ ಸಾಲವನ್ನು ರೈಟ್ ಆಫ್ ಮಾಡಿದ್ದು. ಕಳೆದ 10 ವರ್ಷಗಳಲ್ಲಿ 13.22 ಲಕ್ಷ ಕೋಟಿ ರೂ. ಸುಸ್ತಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. ಒಮ್ಮೆ ರೈಟ್ ಆಫ್ ಮಾಡಿದರೆ ಸುಸ್ತಿ ಸಾಲಕ್ಕೆ ಪ್ರತಿವರ್ಷ ಗಳಿಸಿದ ಲಾಭದಿಂದ ಪೊ›ವಿಜನ್ ಮಾಡುವ ಅವಶ್ಯಕತೆ ಇರದೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ.
ರೆಪೋ ದರದ ಕೊಡುಗೆ: ರೆಪೋ ದರ ಏರಿಕೆಯಾದಾಗ ಸಾಲದ ಮೇಲಿನ ಬಡ್ಡಿ ದರ ಏರುವುದು ಸ್ವಾಭಾವಿಕ. ಅಂತೆಯೇ ಠೇವಣಿ ಮೇಲಿನ ಬಡ್ಡಿಯ ದರವೂ ಏರುತ್ತದೆ. ಕಳೆದ ಒಂದು ವರ್ಷದಲ್ಲಿ 6 ಬಾರಿ ರೆಪೋ ದರ ಏರಿದ್ದು 2.50% ಹೆಚ್ಚಾಗಿದೆ. ಇದರ ನೇರ ಪರಿಣಾಮ ಬ್ಯಾಂಕುಗಳ ಆದಾಯದಲ್ಲಿ ಹೆಚ್ಚಳವಾಗಿದೆ. ಠೇವಣಿ ಮೇಲಿನ ಬಡ್ಡಿದರವು ಸಾಲದ ಮೇಲಿನ ಬಡ್ಡಿದರ ಏರಿದಷ್ಟು ತೀವ್ರಗತಿಯಲ್ಲಿ ಏರಿಲ್ಲ. ಇದು ಅಂದಾಜು 1.50% ಮಾತ್ರ ಏರಿದೆ.
ನಷ್ಟದಲ್ಲಿ ಅಮೆರಿಕ ಬ್ಯಾಂಕುಗಳು: ಒಟ್ಟಿಗೆ 532 ಶತಕೋಟಿ ಅಮೆರಿಕನ್ ಡಾಲರ್ ಅಸ್ತಿ ಹೊಂದಿರುವ ಅಮೆರಿಕದ 3 ಬೃಹತ್ ಬ್ಯಾಂಕುಗಳಾದ ಫಸ್ಟ್ ರಿಪಬ್ಲಿಕ್ ಬ್ಯಾಂಕ್, ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೀಚರ್ ಬ್ಯಾಂಕುಗಳು ನಷ್ಟದಿಂದ ಕುಸಿದು ಜಾಗತಿಕ ಬ್ಯಾಂಕಿಂಗ್ ಉದ್ಯಮ ನಡುಗುತ್ತಿರುವಾಗ, ಭಾರತೀಯ ಬ್ಯಾಂಕುಗಳ ಈ ಸಾಧನೆ ಗಮನ ಸೆಳೆಯುತ್ತಿದೆ. ವಿಶ್ವಾದ್ಯಂತದ ಬ್ಯಾಂಕಿಂಗ್ ಉದ್ಯಮ ಎದ್ದು ನೋಡುವಂತಾಗಿದೆ.
(ಲೇಖಕರು ವಿತ್ತ ವಿಶ್ಲೇಷಕರು)