

ಈಗ ಜಗತ್ತಿನಾದ್ಯಂತ ಒಂದೇ ಮಾತು..ಒಂದೇ ಆತಂಕ. ಅದು ಡೆಡ್ಲಿ ಕರೊನಾ ವೈರಸ್ ಬಗ್ಗೆ.
ಅದೆಷ್ಟೋ ದೇಶಗಳಲ್ಲಿ ಜನರನ್ನು ಬಲಿಪಡೆಯುತ್ತಿರುವ ಕರೊನಾ ವೈರಸ್ಗೆ ನಿಖರ ಔಷಧಿಯೂ ಸಿದ್ಧವಾಗಿಲ್ಲ. ಲಸಿಕೆಯೂ ಇಲ್ಲ. ಮಾರಣಾಂತಿಕ ಕರೊನಾ ನಿಯಂತ್ರಣಕ್ಕೆ ಲಸಿಕೆ ಯಾವಾಗ ತಯಾರಾಗುತ್ತದೆ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಮನಸಲ್ಲಿರುವ ದೊಡ್ಡ ಪ್ರಶ್ನೆ. ಒಂದು ನಿಖರ ಮೆಡಿಸಿನ್ ಮತ್ತು ಲಸಿಕೆಗಾಗಿ ಭಾರತ ಸೇರಿ ಇಡೀ ಜಗತ್ತು ಕಾಯುತ್ತಿದೆ.
ಸೆಪ್ಟೆಂಬರ್ ಅಷ್ಟರಲ್ಲಿ ಕರೊನಾ ವೈರಸ್ಗೆ ಲಸಿಕೆ ಸಿದ್ಧವಾಗುತ್ತದೆ ಎಂದು ಈಗಾಗಲೇ ವರದಿಯಾಗಿದೆ. ಆದರೆ ಭಾರತ ಮೂಲದ ಅಮೇರಿಕದ ಜೀವಶಾಸ್ತ್ರಜ್ಞ, ವೈದ್ಯ, ಕ್ಯಾನ್ಸರ್ ತಜ್ಞ, ಲೇಖಕ ಡಾ. ಸಿದ್ಧಾರ್ಥ ಮುಖರ್ಜಿ ಬೇರೆಯದೇ ಲೆಕ್ಕಾಚಾರ ಹೇಳಿದ್ದಾರೆ.
ಕರೊನಾ ವಿರುದ್ಧ ಲಸಿಕೆ ತಯಾರಾಗಲು ಇನ್ನೂ 18-20ತಿಂಗಳು ಬೇಕಾಗಬಹುದು ಎಂದಿದ್ದಾರೆ. ಲಸಿಕೆ ತಯಾರಿಕಾ ಕಾರ್ಯದ ವೇಗವನ್ನು ಹೆಚ್ಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಸಿದ್ಧಗೊಳಿಸುವ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಆದರೂ 20 ತಿಂಗಳು ಕಾಯುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಹಾಗೇ ಕೊವಿಡ್-19ಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ಯಾಕೆ ಅಷ್ಟು ಸಮಯ ಬೇಕು ಎಂಬುದನ್ನೂ ಡಾ. ಸಿದ್ದಾರ್ಥ್ ತಿಳಿಸಿದ್ದಾರೆ.
ಯಾವುದೇ ವೈರಸ್ ವಿರುದ್ಧ ಹೊಸ ಔಷಧಿ, ಲಸಿಕೆಗಳನ್ನು ಅಭಿವೃದ್ಧಿಪಡಿಸುವಾಗ ಒಂದೊಂದೇ ಹಂತವಾಗಿ ಮಾಡಬೇಕು.
ಈಗ ಇರುವ ಔಷಧಿಯನ್ನೇ ಕರೊನಾಕ್ಕೆ ಕೊಡಲಾಗುತ್ತಿದೆ. ಅವುಗಳು ಮನುಷ್ಯ ದೇಹಕ್ಕೆ ಎಷ್ಟು ಅಗತ್ಯ, ಯಾವ ಪ್ರಮಾಣದಲ್ಲಿ ಬಳಸಬೇಕು ಮತ್ತು ಎಷ್ಟರ ಮಟ್ಟಿಗೆ ಸುರಕ್ಷ ಆಗಿವೆ ಎಂಬುದು ನಮಗೆ ಗೊತ್ತಿದೆ. ಆದರೆ ವೈರಸ್ ವಿರುದ್ಧ ಹೊಸ ಅಣುವಿನಿಂದ ನಿಖರವಾದ ಹೊಸ ಲಸಿಕೆ, ಔಷಧಿ ಅಭಿವೃದ್ಧಿ ಪಡಿಸುವಾಗ ಸುರಕ್ಷತಾ ಮಟ್ಟವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುತ್ತದೆ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.
ಅದರಲ್ಲೂ ಲಸಿಕೆ ಎಂದರೆ ಕರೊನಾ ವೈರಸ್ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡುವುದು. ಅಂದರೆ ಆರೋಗ್ಯವಂತ ಮನುಷ್ಯನ ದೇಹಕ್ಕೆ ಸೇರಿಸುವಂಥದ್ದು. ಹಾಗಾಗಿ ಅದರ ಸುರಕ್ಷತಾ ಮಟ್ಟದ ಪರಿಶೀಲನೆ ಅತ್ಯಂತ ಸೂಕ್ಷ್ಮವಾಗಿ ಮತ್ತು ಸರಿಯಾಗಿ ಇರಬೇಕು. ಸೈಡ್ ಎಫೆಕ್ಟ್ಗಳಿಗೆಲ್ಲ ದಾರಿ ಮಾಡಿಕೊಡುವಂತಿರಲೇಬಾರದು. ಹಾಗಾಗಿ ಲಸಿಕೆ ತಯಾರಿಕೆಗೆ ಏನಿಲ್ಲವೆಂದರೂ 20 ತಿಂಗಳು ಬೇಕು. ನಾವದನ್ನು ಕಂಡು ಹಿಡಿಯಲು ಅವಿರತವಾಗಿ ಶ್ರಮಿಸುತ್ತಿದ್ದೇವೆ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.(ಏಜೆನ್ಸೀಸ್)