

ಬೆಂಗಳೂರು: ಡ್ರೋನ್ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್ ಪ್ರತಾಪ್ ತೀವ್ರ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.
ಇವೆಲ್ಲದರ ನಡುವೆ ಅವರ ವಿರುದ್ಧ ದೂರು ದಾಖಲಾಗಿ, ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಇದರ ಬೆನ್ನಲ್ಲೇ ಟ್ವಿಟರ್ನಲ್ಲಿ ಪ್ರತ್ಯಕ್ಷವಾಗಿರುವ ಪ್ರತಾಪ್, ನೆಟ್ಟಿಗರ ಪ್ರಶ್ನೆಗೆ ಉತ್ತರಿಸುವ ಮೂಲಕ ಸಾರ್ವಜನಿಕ ಸಂಪರ್ಕದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.
ಇಂದು ಟ್ವಿಟ್ಟಿಗರ ಅನೇಕ ಪ್ರಶ್ನೆಗಳಿಗೆ ಪ್ರತಾಪ್ ಅಚ್ಚರಿಯ ಉತ್ತರ ನೀಡಿದ್ದಾರೆ. ಟ್ವಿಟ್ಟಿಗರೊಬ್ಬರು ನೀವು ಬಿಜೆಪಿಗೆ ಸೇರಿಬಿಡಿ, ನಿಮ್ಮ ಪಾಪಗಳೆಲ್ಲಾ ನಾಶವಾಗಿಬಿಡುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್, ಸಾಧ್ಯವೇ ಇಲ್ಲ. ನಾನು ಭವಿಷ್ಯ ಭಾರತದ ಪ್ರಧಾನಮಂತ್ರಿ ರಾಹುಲ್ ಗಾಂಧಿಯವರ ಅಭಿಮಾನಿ ಎಂದು ಉತ್ತರಿಸುವ ಮೂಲಕ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮತ್ತೋರ್ವ ನೆಟ್ಟಿಗ ಡ್ರೋನ್ ಸಂಬಂಧಿಸಿದ ಲಿಫ್ಟ್ ಆ್ಯಂಡ್ ಡ್ರ್ಯಾಗ್ ಎಂದರೇನು? ಎಂದು ಪ್ರತಾಪ್ ಅವರನ್ನು ಪ್ರಶ್ನಿಸಿ ಕಾಲೆಳೆದಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಪ್ರತಾಪ್ ನಿಮಗೆ ಗೊತ್ತಿದ್ದರೆ, ನೀವೇ ಏಕೆ ವಿವರಿಸಬಾರದು ಎಂದು ಪ್ರತಿಕ್ರಿಯಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.