

ಮಿದುಳಿನ ಕೆಲವು ಭಾಗಗಳಿಗೆ ಸರಿಯಾಗಿ ರಕ್ತ ಸಂಚಾರ ವಾಗದೇ ಇರುವ ಕಾರಣ ಸ್ಟ್ರೋಕ್ ಉಂಟಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಇದರಲ್ಲಿ ಎರಡು ವಿಧ. ಮೊದಲನೆಯದು ಇಸ್ಕೆಮಿಕ್ ಸ್ಟ್ರೋಕ್ (ischemic stroke). ಈ ವಿಧದಲ್ಲಿ ಮಿದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದ ಅಡೆತಡೆ ಯಿಂದಾಗಿ ಸ್ಟ್ರೋಕ್ ಉಂಟಾಗುತ್ತದೆ. ಇದು ಮೂರು ರೀತಿಯಲ್ಲಿ ಆಗಬಹುದು. ನಮ್ಮ ಆಹಾರ, ದಿನಚರಿಗಳ ಕಾರಣದಿಂದ ರಕ್ತನಾಳದ ಒಳಗೆ ಬ್ಲಾಕ್ ಉಂಟಾಗುವುದರಿಂದ ಅಥವಾ ಬೇರೆ ಎಲ್ಲೋ ಹೆಪ್ಪುಗಟ್ಟಿದ ರಕ್ತ ಮಿದುಳಿಗೆ ಸಂಚರಿಸಿ ಮಿದುಳಿನ ಸೂಕ್ಷ್ಮ ರಕ್ತನಾಳಗಳಲ್ಲಿ ಸಿಕ್ಕಿಹಾಕಿಕೊಂಡು ಮುಂದಿನ ಭಾಗಗಳಿಗೆ ರಕ್ತ ಸಂಚಾರವಾಗದಂತೆ ತಡೆದರೂ ಸ್ಟ್ರೋಕ್ ಆಗುತ್ತದೆ. ಇನ್ನೊಂದು Transient Ischemic Stroke Meaning ಅಂದರೆ ತಾತ್ಕಾಲಿಕವಾಗಿ ರಕ್ತಸಂಚಾರ ಆಗದೇ ಇರುವುದು. ಹೀಗೆ ಆಗುವುದು ಮುಂದೆ ದೊಡ್ಡ ಪ್ರಮಾಣದ ಸ್ಟ್ರೋಕ್ ಆಗುವ ಮುನ್ಸೂಚನೆ ಇರಬಹುದು.
ಎರಡನೆಯದು ರಕ್ತಸ್ರಾವದಿಂದಾದ ಅಂದರೆ ನಾವು ರಕ್ತದೊ ತ್ತಡ (ಬಿಪಿ) ವನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೇ ಹೋದಾಗ ರಕ್ತನಾಳ ಗಳು ಒಡೆದು ಮಿದುಳಿನಲ್ಲಿ ರಕ್ತ ಸೋರಿಕೆಯಾಗಿ ಪಾರ್ಶ್ವವಾಯು ಉಂಟಾಗುತ್ತದೆ. ಈ ರೀತಿಯಾದ ಸ್ಟ್ರೋಕ್ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಾಗಿ ಬಿಪಿ, ಹೃದಯದ ಸಮಸ್ಯೆಗಳು, ಡಯಾಬಿಟೀಸ್, ಕೊಲೆಸ್ಟ್ರಾಲ್ ಹೆಚ್ಚಾಗಿರುವುದು, ಬೊಜ್ಜು ಮುಂತಾದ ತೊಂದರೆಗಳಿರುವವರು ವೈದ್ಯರ ಸಲಹೆಯನ್ನು ಪಡೆದು ಹೆಚ್ಚು ಕಾಳಜಿಯನ್ನು ವಹಿಸಲೇಬೇಕು. ಈ ರೀತಿಯ ತೊಂದರೆಗಳಿಗೆ ಸರಿಯಾಗಿ ಔಷಧೋಪಚಾರವನ್ನು ಮಾಡಿಕೊಳ್ಳದೇ ಉದಾಸೀನ ಮಾಡಿದರೆ ಹತೋಟಿಯಲ್ಲಿಲ್ಲದ ಈ ಕಾಯಿಲೆಗಳು ಮುಂದೆ ಪಾರ್ಶ್ವವಾಯುವಿಗೆ ಕಾರಣವಾಗಬಲ್ಲವು.
ಯಾವ ತಪ್ಪುಗಳಿಂದ ಹೀಗಾಗುತ್ತದೆ?: ತಂಬಾಕು, ಸಿಗರೇಟ್ ಸೇವನೆ, ದೈಹಿಕ ಶ್ರಮ ಇಲ್ಲದೇ ಇರುವುದು, ಅತಿಯಾಗಿ ಮದ್ಯಪಾನ ಮಾಡುವುದು, ಜಂಕ್ಫುಡ್ ಅಂದರೆ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು, ಅತಿಯಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಆಹಾರ, ನಿದ್ರೆ, ಮಲಮೂತ್ರ ವಿಸರ್ಜನೆ ಇತ್ಯಾದಿ ದೈನಂದಿನ ವಿಚಾರಗಳಲ್ಲಿ ತುಂಬಾ ವ್ಯತ್ಯಯ ಮಾಡುವುದು ಮುಂತಾದ ಕಾರಣಗಳಿಂದ ಸ್ಟ್ರೋಕ್ ಸಂಭವಿಸುತ್ತದೆ.
ಹೇಗೆ ತಡೆಗಟ್ಟಬಹುದು?: ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು, ಒಳ್ಳೆಯ ರೀತಿಯ ಆಹಾರ, ದಿನಚರಿ, ಮಾನಸಿಕ ಸ್ಥಿತಿಗಳನ್ನು ಕಾಯ್ದುಕೊಂಡರೆ ಇಂತಹ ತೊಂದರೆಗಳು ಸುಲಭವಾಗಿ ಬರಲು ಸಾಧ್ಯವಿಲ್ಲ. ಜೊತೆಗೆ ಐದಾರು ತಿಂಗಳಿಗೊಮ್ಮೆಯಾದರೂ ಕುಟುಂಬ ವೈದ್ಯರನ್ನು ಭೇಟಿಯಾಗಿ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದರೆ ಆಗಲೂ ಸುಲಭವಾಗಿ ಇಂತಹ ತೊಂದರೆಗಳು ಉಂಟಾಗಲು ಸಾಧ್ಯವಿಲ್ಲ.
ಸ್ಟ್ರೋಕ್ ಸಂಭವಿಸಿದಾಗ ಏನು ಮಾಡಬೇಕು? : ಸ್ಟ್ರೋಕ್ ಅಥವಾ ಪಾರ್ಶ್ವವಾಯು ಸಂಭವಿಸಿದ ತಕ್ಷಣ ಸ್ವಲ್ಪವೂ ತಡ ಮಾಡದೇ ಆಸ್ಪತ್ರೆಗೆ ರೋಗಿಯನ್ನು ದಾಖಲು ಮಾಡಬೇಕು. ವೈದ್ಯರ ಮಾರ್ಗದರ್ಶನದಂತೆ ಸರಿಯಾಗಿ ಚಿಕಿತ್ಸೆ ಕೊಡಿಸಲೇಬೇಕು. ತುಂಬಾ ದೊಡ್ಡ ಪ್ರಮಾಣದಲ್ಲಿ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿರುವ ಸಂದರ್ಭಗಳಲ್ಲಿ ಅಥವಾ ಮಿದುಳಿಗೆ ರಕ್ತಸಂಚಾರ ಮಾಡುವ ರಕ್ತನಾಳಗಳಲ್ಲಿ ದೊಡ್ಡ ಪ್ರಮಾಣದ ದೋಷಗಳಿರುವ ಸಂದರ್ಭಗಳಲ್ಲಿ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಬರಬಹುದು. ಆಗ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಶಸ್ತ್ರ ಅಥವಾ ಔಷಧ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಪಾರ್ಶ್ವವಾಯು ಸಂಭವಿಸಿದ ಆರು ತಿಂಗಳು ಅಥವಾ ಒಂದು ವರ್ಷದವರೆಗೆ ಅದನ್ನು ಗುಣಮಾಡಿಕೊಳ್ಳಲು ಅವಕಾಶವಿರುತ್ತದೆ. ಹಾಗಾಗಿ ಫಿಸಿಯೋಥೆರಪಿ (ವ್ಯಾಯಾಮ ಚಿಕಿತ್ಸೆ) ವಿರೇಚನ, ಬಸ್ತಿ, ನಸ್ಯಕರ್ಮದಂತಹ ಪಂಚಕರ್ಮ ಚಿಕಿತ್ಸೆಗಳು, ಕೆಲವು ವಿಶೇಷ ಪ್ರಕೃತಿ ಚಿಕಿತ್ಸೆಗಳು, ಆಕ್ಯುಪ್ರೆಶರ್ ನಂತಹ ಚಿಕಿತ್ಸೆಗಳ ಮೂಲಕ ಈ ತೊಂದರೆಯಿಂದ ಆದ ವಿಕಾರಗಳನ್ನು ಸರಿ ಮಾಡಬಹುದು.
ಈ ವಿಷಯದಲ್ಲಿ ಸಮಸ್ಯೆಯನ್ನು ತಡೆಯಲು ಮತ್ತು ಸಮಸ್ಯೆಯಾದ ನಂತರ ಅದು ಬೇಗ ಗುಣವಾಗುವಂತೆ ಮಾಡಲು ಯೋಗ ಕೂಡ ಸಹಾಯಮಾಡುತ್ತದೆ. ಅಂದರೆ ಕೆಲವು ವಿಶೇಷ ಪ್ರಾಣಾಯಾಮಗಳು ಮತ್ತು ಮುದ್ರೆಗಳ ಮೂಲಕ ಈ ತೊಂದರೆಯನ್ನು ಬರದಂತೆ ತಡೆಯಬಹುದು; ಬಂದ ನಂತರ ಗುಣಪಡಿಸಬಹುದು. ಒಟ್ಟಿನಲ್ಲಿ ಸ್ಟ್ರೋಕ್ ಆಗದಂತೆ ನೋಡಿಕೊಳ್ಳುವುದು ಜಾಣತನ. ಒಂದು ವೇಳೆ ಸಂಭವಿಸಿದರೆ ಸೂಕ್ತ ಚಿಕಿತ್ಸೆಗಳನ್ನು ತೆಗೆದುಕೊಂಡು ಆದಷ್ಟು ಬೇಗ ಗುಣಪಡಿಸಿಕೊಳ್ಳಲು ಪ್ರಯತ್ನಿಸುವುದು ಬುದ್ಧಿವಂತಿಕೆ.