‘12-13 ವರ್ಷದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಖಾತೆ ಹೇಗೆ?’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಚಾಟಿ | Social Media Ban for Minors

12-13 ವರ್ಷದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಅಪ್ರಾಪ್ತ ಮಕ್ಕಳ ಆನ್‌ಲೈನ್‌ ಸುರಕ್ಷತೆಗೆ ಅಗತ್ಯ ಕಾನೂನು ಕ್ರಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
 Social Media Ban for Minors
ಅಪ್ರಾಪ್ತರ ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
Published on: 
Summary

ಅಪ್ರಾಪ್ತರ ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಮಕ್ಕಳಿಗಾಗಿ ಸೂಕ್ತ ಸುರಕ್ಷತಾ ಕ್ರಮ ರೂಪಿಸುವಂತೆ ಕೇಂದ್ರಕ್ಕೆ ಸೂಚನೆ

ಕನಿಷ್ಠ 18 ವರ್ಷದ ವಯೋಮಿತಿ ಜಾರಿಗೆ ತರಲು ಪರಿಶೀಲನೆ ಅಗತ್ಯ

Supreme Court Social Media: 12-13 ವರ್ಷದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುತ್ತಿರುವುದು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಅಪ್ರಾಪ್ತ ಮಕ್ಕಳ ಆನ್‌ಲೈನ್‌ ಸುರಕ್ಷತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇನ್ನು, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರನ್ನೊಳಗೊಂಡಿದೆ. ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲಯನ್ಸ್ (JRCA) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ ಈ ವಿಚಾರ ಪ್ರಸ್ತಾಪಿಸಿದೆ.

18 ವರ್ಷ ವಯೋಮಿತಿ?

ಸಾಮಾಜಿಕ ಜಾಲತಾಣ ಖಾತೆ ತೆರೆಯುವಾಗ ಸೇವಾ ಷರತ್ತುಗಳು ಹಾಗೂ ಗೌಪ್ಯತಾ ನೀತಿಗಳಿಗೆ ಒಪ್ಪಿಗೆ ನೀಡಬೇಕಾಗುತ್ತದೆ. ಆದರೆ, ಅಪ್ರಾಪ್ತರಿಗೆ ಸ್ವತಂತ್ರವಾಗಿ ಗುತ್ತಿಗೆ ಮಾಡಿಕೊಳ್ಳುವ ಕಾನೂನುಬದ್ಧ ಸಾಮರ್ಥ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಹೀಗಾಗಿ 18 ವರ್ಷವನ್ನು ಕನಿಷ್ಠ ವಯೋಮಿತಿಯಾಗಿ ನಿಗದಿಪಡಿಸುವ ಕುರಿತು ಕೇಂದ್ರ ಪರಿಶೀಲಿಸಬೇಕು ಎಂದು ಕೋರ್ಟ್‌ ಸೂಚಿಸಿದೆ.

ಪೋಷಕರ ಒಪ್ಪಿಗೆ

ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಕ್ಕಳ ವೈಯಕ್ತಿಕ ಮಾಹಿತಿ ಬಳಕೆಗೆ ಪೋಷಕರು ಅಥವಾ ಪಾಲಕರ ಒಪ್ಪಿಗೆ ಅಗತ್ಯವಿರುವ ಸುರಕ್ಷತಾ ಕ್ರಮಗಳು ಡಿಪಿಡಿಪಿ ಕಾಯ್ದೆ, 2023ರಲ್ಲಿ ಇರುವುದಾಗಿ ತಿಳಿಸಿದರು. ಈ ವಿಚಾರಕ್ಕೆ ಕೇವಲ ಮಾರ್ಗಸೂಚಿಗಳ ಬದಲು ಕಾನೂನುಬದ್ಧ ಆಧಾರ ಅಗತ್ಯವಾಗಬಹುದು ಎಂದು ಹೇಳಿ, ಕೇಂದ್ರ ಕಾಲಾವಕಾಶ ಕೋರಿದೆ.

ಮಕ್ಕಳ ಸುರಕ್ಷತೆ ಬಗ್ಗೆ ಕಳವಳ

ಸಾಮಾಜಿಕ ಜಾಲತಾಣ ಬಳಕೆಯಿಂದ ಮಕ್ಕಳಿಗೆ ಆನ್‌ಲೈನ್‌ ಗ್ರೂಮಿಂಗ್, ಲೈಂಗಿಕ ಶೋಷಣೆ, ಸೈಬರ್‌ಬುಲ್ಲಿಯಿಂಗ್, ವೈಯಕ್ತಿಕ ಮಾಹಿತಿ ದುರ್ಬಳಕೆ ಹಾಗೂ ವಯಸ್ಸಿಗೆ ಸೂಕ್ತವಲ್ಲದ ವಿಷಯಗಳ ಅಪಾಯ ಎದುರಾಗಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಕೋರ್ಟ್‌ ಈ ಹಿಂದೆಯೂ ಹೇಳಿತ್ತು.

ಇದನ್ನೂ ಓದಿ: ಗಂಗಾ ಎಕ್ಸ್‌ಪ್ರೆಸ್‌ವೇ ಜಲಾವೃತ ; ವೈರಲ್ ಆಯ್ತು ರಸ್ತೆಯಲ್ಲೇ ಮೀನು ಹಿಡಿದ ದೃಶ್ಯ | Ganga Expressway

ಹೊಸ ನಿಯಮ ಜಾರಿಗೆ ಬರುತ್ತಾ?

ಸಾಮಾಜಿಕ ಜಾಲತಾಣಗಳು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ತಮ್ಮ ವ್ಯವಸ್ಥೆ ರೂಪಿಸುವಂತೆ 2021ರ ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಕೋರ್ಟ್‌ ಸೂಚಿಸಿದೆ. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮಧ್ಯವರ್ತಿಗಳ ವಿರುದ್ಧ ನಿರ್ದೇಶನ ನೀಡಬೇಕಾಗಬಹುದು ಎಂದು ಕೋರ್ಟ್‌ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net