

ನವದೆಹಲಿ : ಭಾರತವು ಹಾಲಿ ಎದುರಿಸುತ್ತಿರುವ ಕರೊನಾ ಸಮಸ್ಯೆಯನ್ನು ಸುನಾಮಿ ಎಂದು ದೆಹಲಿ ಹೈಕೋರ್ಟ್ ಬಣ್ಣಿಸಿದೆ. "ಮೇ ನಡುವಿನಲ್ಲಿ ಕರೊನಾ ವೈರಸ್ ಸೋಂಕು ಅತ್ಯಂತ ಹೆಚ್ಚಾಗಲಿದೆ ಎಂದು ದೆಹಲಿ ಐಐಟಿ ಹೇಳಿದೆ. ಆ ಸಮಯಕ್ಕೆ ಕರೊನಾ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡಲು ಸರ್ಕಾರದ ಯೋಜನೆ ಏನಿದೆ" ಎಂದು ಪ್ರಶ್ನಿಸಿದೆ.
ಕರೊನಾ ರೋಗಿಗಳ ಚಿಕಿತ್ಸೆಗೆ ಮೆಡಿಕಲ್ ಆಕ್ಸಿಜನ್ಅನ್ನು ಪೂರೈಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ಕೋರಿರುವ ದೆಹಲಿಯ ಆಸ್ಪತ್ರೆಗಳ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ಈ ಪ್ರಶ್ನೆ ಎತ್ತಿದೆ. ಕರೊನಾದ 'ಪೀಕ್'ಅನ್ನು ಎದುರಿಸಲು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಯಾವ ಮಟ್ಟದಲ್ಲಿ ಸಜ್ಜಾಗಿವೆ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಕೇಳಿದೆ.
"ನಾವು ಮೇ ಮಧ್ಯದಲ್ಲಿ ಪೀಕ್ ಪ್ರಕರಣಗಳನ್ನು ಎದುರಿಸಲಿದ್ದೇವೆ. ಇದೊಂದು ಸುನಾಮಿ. ಕೆಲವರು ಸತ್ತೇ ಸಾಯುತ್ತಾರೆ. ಅದು ಅನಿವಾರ್ಯ. ಆದರೆ ಯಾರನ್ನು ಉಳಿಸಬಹುದೋ ಆ ಜನರನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ" ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಸರ್ಕಾರವು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕು ಎಂದರು.
ಕರೊನಾ ಎರಡನೇ ಅಲೆಯು ಇನ್ನೂ ಹದಗೆಡುವ ಸೂಚನೆಗಳಿರುವುದರಿಂದ ಹಾಸಿಗೆಗಳು, ಔಷಧಿಗಳು, ವೈದ್ಯರು, ಪ್ಯಾರಾಮೆಡಿಕ್ ಸಿಬ್ಬಂದಿ ಮುಂತಾದ ಸಂಪನ್ಮೂಲಗಳನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಗಮನ ಹರಿಸಬೇಕು ಎಂದು ನ್ಯಾಯಪೀಠ ಹೇಳಿತು. (ಏಜೆನ್ಸೀಸ್)