ರೈತನ ಮನೆಗೆ ಕನ್ನ ಹಾಕಿದ ಖದೀಮರು; ₹ 1.07 ಕೋಟಿ ಕದ್ದ ಕಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸ್ ಸ್ನಿಫರ್ ಡಾಗ್ | Gujarat

Untitled-design-64
Published on

ಅಹಮದಾಬಾದ್: ಗುಜರಾತ್‌(Gujarat)ನ ಅಹಮದಾಬಾದ್ ಜಿಲ್ಲೆಯಲ್ಲಿ 1.07 ಕೋಟಿ ರೂಪಾಯಿ ಕಳ್ಳತನ ಪ್ರಕರಣವನ್ನು ಭೇದಿಸಲು ಪೊಲೀಸ್ ಸ್ನಿಫರ್ ಡಾಗ್ ಸಹಾಯ ಮಾಡಿದ್ದು ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ (ಅಕ್ಟೋಬರ್​​ 18) ಈ ಮಾಹಿತಿ ನೀಡಿದ್ದಾರೆ.

ಪೆನ್ನಿ ಎಂಬ ಡಾಬರ್‌ಮ್ಯಾನ್‌ನ ಸಹಾಯದಿಂದ ಗುರುವಾರ ಜಿಲ್ಲಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಅವರು ಕದ್ದಿದ್ದ ಸಂಪೂರ್ಣ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧೋಲ್ಕಾ ತಾಲೂಕಿನ ಸರಗ್ವಾಲಾ ಗ್ರಾಮದ ನಿವಾಸಿಯಾದ ಬುಧ ಸೋಲಂಕಿ ಮತ್ತು ಆತನ ಸಹಚರ ವಿಕ್ರಮ್ ಸೋಲಂಕಿಯನ್ನು ಆರೋಪಿಗಳು ಎಂದು ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

52 ವರ್ಷದ ರೈತರೊಬ್ಬರು ತನ್ನ ಗ್ರಾಮದ ಬಳಿ ಇರುವ ಲೋಥಲ್ ಪುರಾತತ್ವ ಸ್ಥಳದ ಬಳಿ ಇರುವ ಜಮೀನನ್ನು 1.07 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಈ ಹಣವನ್ನು ಬಳಸಿಕೊಂಡು ಮತ್ತೊಂದು ಜಮೀನು ಖರೀದಿಸಲು ರೈತರು ಯೋಜಿಸಿದ್ದರಿಂದ, ಅವರು ಹಣವನ್ನು ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತಮ್ಮ ಕಚ್ಚಾ ಮನೆಯೊಳಗೆ ಇಟ್ಟಿದ್ದರು. ಅಕ್ಟೋಬರ್ 12ರಂದು ತನ್ನ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಆನಂದ್ ಜಿಲ್ಲೆಯ ತಾರಾಪುರಕ್ಕೆ ಹೋಗಿದ್ದರು. ಆ ಸಮಯದಲ್ಲಿ ಈ ಕಳ್ಳತನ ನಡೆದಿದೆ ಎಂದು ಕೋಥ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪಿಎನ್ ಗೋಹಿಲ್ ಹೇಳಿದರು.

ಅಕ್ಟೋಬರ್ 12ರ ರಾತ್ರಿ ಕೆಲವು ವ್ಯಕ್ತಿಗಳು ಕಿಟಕಿಯ ಬಳಿ ಕೆಲವು ಇಟ್ಟಿಗೆಗಳನ್ನು ತೆಗೆದು ಮನೆಗೆ ನುಗ್ಗಿ ಹಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದರು. ಕಳ್ಳತನ ನಡೆದಿರುವುದನ್ನು ಗಮನಿಸಿದ ರೈತ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಅಹಮದಾಬಾದ್ ಗ್ರಾಮಾಂತರ ಪೊಲೀಸರು ತನಿಖೆಗಾಗಿ ಹಲವು ತಂಡಗಳನ್ನು ರಚಿಸಿದ್ದರು. ನಾವು 30 ಶಂಕಿತರನ್ನು ವಿಚಾರಣೆ ನಡೆಸಿದ್ದೇವೆ ಮತ್ತು ತನಿಖೆಯ ಸಮಯದಲ್ಲಿ 60 ಜನರ ಕರೆ ಡೇಟಾ ದಾಖಲೆಗಳನ್ನು ಪರಿಶೀಲಿಸಿದ್ದೇವೆ ಎಂದು ಅವರು ವಿವರಿಸಿದರು.

ರೈತನ ಸ್ನೇಹಿತ ಬುದ್ಧ ಧರ್ಮಶಿ ಸೋಲಂಕಿ ಅವರ ಮನೆಯನ್ನು ತಲಾಶ್​ ಮಾಡಿದಾಗ 53.90 ಲಕ್ಷ ರೂ.ನಗದು ಪತ್ತೆಯಾಗಿದೆ. ಅಪರಾಧದ ಮೊದಲು ರೈತನೊಂದಿಗೆ ಕೊನೆಯದಾಗಿ ಮಾತನಾಡಿದವರಲ್ಲಿ ಬುದ್ಧ ಧರ್ಮಶಿ ಸೋಲಂಕಿ ಕೂಡ ಒಬ್ಬನಾಗಿದ್ದ. ಹೆಚ್ಚಿನ ವಿಚಾರಣೆಯ ಸಮಯದಲ್ಲಿ ಬುದ್ಧನು ಅದೇ ಗ್ರಾಮದ ನಿವಾಸಿ ತನ್ನ ಸಹಚರ ವಿಕ್ರಮ್ ವೀರಸಿಂಗ್ ಸೋಲಂಕಿಯೊಂದಿಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು. ಅಪರಾಧಿಗಳನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಹಮದಾಬಾದ್ ಗ್ರಾಮಾಂತರ ಪೊಲೀಸರ ಶ್ವಾನದಳದ ಡಾಬರ್‌ಮ್ಯಾನ್ ಪೆನ್ನಿಯನ್ನು ವಿಶೇಷವಾಗಿ ಉಲ್ಲೇಖಿಸಿ ಧನ್ಯವಾದ ತಿಳಿಸಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net