

ವಾಷಿಂಗ್ಟನ್: ಅಮೆರಿಕಾದ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಕಿವಿಗೆ ಗುಂಡು ಹೊಕ್ಕಿದ್ದರೂ ಇನ್ನು 2ಸೆಂಮೀ ಬಲಕ್ಕೆ ಅದು ತಾಗಿದ್ದರೆ ಅನಾಹುತವಾಗುತ್ತಿತ್ತು ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ಟ್ರಂಪ್ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಬಲ ಕಿವಿಯ ಮೇಲ್ಭಾಗಕ್ಕೆ ಗುಂಡು ಅವರ ತಾಗಿದೆ. ಗುಂಡು ಕಿವಿಯನ್ನು ಸೀಳಿಕೊಂಡು ಹೋಗುತ್ತಿದ್ದಂತೆ ಟ್ರಂಪ್ ಕಿವಿಯನ್ನು ಮುಟ್ಟಿಕೊಂಡಿದ್ದಾರೆ. ಕೂಡಲೇ ಅವರು ವೇದಿಕೆ ಮೇಲೆ ವಾಲಿಕೊಂಡಿದ್ದಾರೆ. ಆಗ ಸೀಕ್ರೇಟ್ ಸರ್ವೀಸ್ ಅಧಿಕಾರಿಗಳು ಸುತ್ತುವರಿದು ಪಕ್ಕಕ್ಕೆ ಕರೆದೊಯ್ದಿದ್ದಾರೆ.
ಬುಲೆಟ್ನ ಪಥವು ಅದರ ಬಲಕ್ಕೆ 2 ಸೆಂಟಿಮೀಟರ್ ಆಗಿದ್ದರೆ, ಅದು ಮಾಜಿ ಅಧ್ಯಕ್ಷ ಟ್ರಂಪ್ಗೆ ಮಾರಕವಾಗುತ್ತಿತ್ತು. ಅದು ಹೆಡ್ಶಾಟ್ ಆಗುತ್ತಿತ್ತು. ಟ್ರಂಪ್ ತಮ್ಮ ಭಾಷಣದ ಸಮಯದಲ್ಲಿ ದೇಹವನ್ನು ಅತ್ತಿತ್ತ ಚಲಿಸುತ್ತಿದ್ದುದರಿಂದ ಬಹುಷಃ ಅವರು ಬದುಕುಳಿದಿದ್ದಾರೆ ಎನ್ನಲಾಗುತ್ತಿದೆ.
ಗುಂಡು ತಾಗಿದ್ದರೂ ಟ್ರಂಪ್ ಮುಷ್ಟಿ ಹಿಡಿದು ಕೈ ಮೇಲಕ್ಕೆತ್ತಿ ಧಿಕ್ಕಾರದ ಘೋಷಣೆ ಕೂಗಿದ್ದು ಗಮನ ಸೆಳೆಯಿತು. ಘಟನೆಯಲ್ಲಿ ಒಬ್ಬ ಪ್ರೇಕ್ಷಕ ಸಾವನ್ನಪ್ಪಿದ್ದಾನೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದ ಹೊರಗಿನ ಎತ್ತರದ ಕಟ್ಟಡದಿಂದ ಗುಂಡಿನ ದಾಳಿ ಮಾಡಲಾಗಿದೆ. ಶಂಕಿತ ಶೂಟರ್ ನನ್ನು ಸಹ ಕೊಂದಿರುವುದಾಗಿ ಸೀಕ್ರೇಟ್ ಸರ್ವೀಸ್ ಹೇಳಿದೆ.