

ಬೆಂಗಳೂರು: ಆನ್‌ಲೈನ್ ಗೇಮ್‌ನ ಗೀಳಿಗೆ ಬಿದ್ದ ಗೃಹಿಣಿಯೊಬ್ಬರು ಲಕ್ಷಾಂತರ ರೂ.ಹಣ ಕಳೆದುಕೊಂಡು ಪತ್ರ ಬರೆದಿಟ್ಟು ಇಬ್ಬರು ಪುಟ್ಟ ಮಕ್ಕಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದು, ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾಲಕ್ಷ್ಮೀ ಲೇಔಟ್‌ನ ಜೆ.ಸಿ.ನಗರ ನಿವಾಸಿ ನಂದನಾ(೨೬), ಸನ್ನಿಧಿ(೬) ಹಾಗೂ ಚಾರ್ವಿಕ್(೧) ನಾಪತ್ತೆಯಾದವರು. ಆ.೮ರ ಸಂಜೆಯಿಂದ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ‘ನನ್ನನ್ನು ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪತಿ ಕೆ.ಜೆ.ಅವಿನಾಶ್ ನೀಡಿದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆ ಹಾಗೂ ಆಕೆಯ ಮಕ್ಕಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
ಆನ್‌ಲೈನ್ ಲೂಡೋ ಗೇಮ್ ಗೀಳು:
ಅವಿನಾಶ್ ಮತ್ತು ನಂದನಾ ಏಳು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ದಂಪತಿಗೆ ಆರು ವರ್ಷದ ಪುತ್ರಿ ಸನ್ನಿಧಿ ಹಾಗೂ ಒಂದು ವರ್ಷದ ಚಾರ್ವಿಕ್ ಎಂಬ ಪುತ್ರ ಇದ್ದಾರೆ. ಅವಿನಾಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಂದನಾ ಗೃಹಿಣಿಯಾಗಿದ್ದರು. ಕಳೆದ ಒಂದು ವರ್ಷದಿಂದ ನಂದನಾ ಮೊಬೈಲ್‌ನಲ್ಲಿ ಆನ್‌ಲೈನ್ ಲೂಡೋ ಗೇಮ್ ಆಡುತ್ತಿದ್ದರು. ಈ ಆಟಕ್ಕಾಗಿ ಮನೆಯಲ್ಲಿದ್ದ ೫೦ ಸಾವಿರ ರೂ. ನಗದು ಹಾಗೂ ೧.೨೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಡಮಾನವಿರಿಸಿ ಪಡೆದ ಹಣ ಹಾಗೂ ಸಂಬಂಧಿಕರಿಂದ ಸಾಲ ಪಡೆದ ೧.೭೫ ಲಕ್ಷ ರೂ. ಸೇರಿ ಒಟ್ಟು ೩.೪೫ ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಗೊತ್ತಾಗಿ ತಿಂಗಳ ಹಿಂದೆ ಅವಿನಾಶ್ ಪ್ರಶ್ನೆ ಮಾಡಿದಾಗ, ‘ನಾನು ತಪ್ಪು ಮಾಡಿದ್ದೇನೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ’ ಎಂದು ನಂದನಾ ಹೇಳಿದ್ದರು.
ಮತ್ತೊಮ್ಮೆ ಚಿನ್ನಾಭರಣ ಅಡಮಾನ:
ಈ ನಡುವೆ ಜುಲೈ ೧೯ರಂದು ಮತ್ತೊಮ್ಮೆ ೧.೨೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಡಮಾನವಿರಿಸಿ ಹಣ ಪಡೆದಿರುವ ವಿಚಾರ ಅವಿನಾಶ್‌ಗೆ ಗೊತ್ತಾಗಿದೆ. ಈ ವೇಳೆ ಆಕೆಯ ಪಾಲಕರಿಗೆ ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡಿರುವ ವಿಚಾರವನ್ನು ಅವಿನಾಶ್ ತಿಳಿಸಿ, ಆಕೆಗೆ ಸೂಕ್ತ ತಿಳಿವಳಿಕೆ ನೀಡುವಂತೆ ಹೇಳಿದ್ದಾರೆ. ಆ.೮ರಂದು ಮಧ್ಯಾಹ್ನ ೩ ಗಂಟೆಗೆ ಅವಿನಾಶ್ ಪುತ್ರಿ ಸನ್ನಿಧಿಯನ್ನು ಶಾಲೆಯಿಂದ ಮನೆಗೆ ಕರೆತಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು.
ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ:
ಸಂಜೆ ೪.೪೫ಕ್ಕೆ ಪತ್ನಿ ನಂದನಾ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದೆ. ತಕ್ಷಣ ಮನೆ ಬಳಿ ಬಂದು ತಮ್ಮ ಬಳಿಯಿಂದ ಕೀ ಬಳಸಿ ಮನೆ ಬೀಗ ತೆರೆದು ಮನೆ ಪ್ರವೇಶಿಸಿದ್ದಾರೆ. ಈ ವೇಳೆ ಮನೆಯ ಟೇಬಲ್ ಮೇಲೆ ‘ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ’ ನಿಮ್ಮನ್ನು ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ನನ್ನಿಂದ ನಿಮಗೆ ನಷ್ಟವಾಗಿದೆ. ಮನೆಯಲ್ಲಿರುವ ದುಡ್ಡು ತೆಗೆದುಕೊಂಡು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ’ ಎಂದು ಪತ್ರ ಬರೆದಿಟ್ಟಿರುವುದು ಕಂಡು ಬಂದಿದೆ.
ಜತೆಗೆ ಮನೆ ಪರಿಶೀಲಿಸಿದಾಗ ನಂದನಾ ತನ್ನ ಹಾಗೂ ಮಕ್ಕಳ ದಾಖಲೆಗಳು ಮತ್ತು ಬಟ್ಟೆಗಳನ್ನು ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸಂಬಂಧಿಕರು, ಸ್ನೇಹಿತರು, ಪರಿಚಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ನಿ ಮಕ್ಕಳು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಹಿಳೆ ಹಾಗೂ ಮಕ್ಕಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.