ಧಾರಾಕಾರ ಮಳೆಗೆ ಮನೆಗಳು ಜಲಾವೃತ

photo 1 c
ಧಾರಾಕಾರ ಮಳೆಗೆ ಮನೆಗಳಿಗೆ ನೀರು ನುಗ್ಗಿರುವುದು.
Published on

ನಂಜನಗೂಡು: ಶುಕ್ರವಾರ ತಡರಾತ್ರಿ 3 ಗಂಟೆಗಳಿಗೂ ಹೆಚ್ಚುಕಾಲ ಸುರಿದ ಧಾರಾಕಾರ ಮಳೆಗೆ ನಗರದ ಅಶೋಕಪುರಂ ಬಡಾವಣೆ 5 ಮತ್ತು 6 ಕ್ರಾಸ್, ನಟರಾಜ ಬಡಾವಣೆಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.
ನಂಜನಗೂಡು ನಗರದ 27ನೇ ವಾರ್ಡ್ ಅಶೋಕಪುರಂ ಬಡಾವಣೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ಜತೆಗೆ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಶೋಕಪುರಂ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಮೂರು ನಾಲ್ಕು ಬಾರಿ ಮಳೆ ಬಂದಾಗ ಮನೆಗಳು ಸಂಪೂರ್ಣವಾಗಿ ಜಲಾವೃತವಾಗುತ್ತಿವೆ. ಇದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು ಸಂಪೂರ್ಣವಾಗಿ ನಾಶವಾಗಿದೆ. ವಾಸಿಸಲು ಮನೆಯಿಲ್ಲದಂತಾಗಿದೆ. ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ನಗರಸಭಾ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ 5 ಮತ್ತು 6ನೇ ತಿರುವಿನಲ್ಲೂ ಕೂಡ ಚರಂಡಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಗಿತ್ತು. ನಗರದ ನಟರಾಜ ಬಡಾವಣೆಯಲ್ಲಿ ಸುಮಾರು 6 ಮನೆಗಳಿಗೆ ನೀರು ನುಗ್ಗಿದೆ ಜತೆಗೆ ಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ 3 ಅಡಿಗಳಷ್ಟು ನೀರು ತುಂಬಿಕೊಂಡು ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗಿತ್ತು. ಸಾರ್ವಜನಿಕರ ಆಕ್ರೋಶದಿಂದ ಎಚ್ಚೆತ್ತ ನಗರಸಭಾ ಅಧಿಕಾರಿಗಳು ಶನಿವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿದು ಚರಂಡಿಗಳನ್ನು ಸ್ವಚ್ಛಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net