ಲಾಟರಿ ಮೂಲಕ ಗೋವಿಂದಾಪುರದ ಫಲಾನುಭವಿಗಳಿಗೆ ಮನೆ ಹಂಚಿಕೆ

mlc balkish baanu visit govindapura
ಗೋವಿಂದಾಪುರದಲ್ಲಿ ವಸತಿ ಸಮುಚ್ಚಯವನ್ನು ಎಂಎಲ್‌ಸಿ ಬಲ್ಕಿಷ್ ಬಾನು ಪರಿಶೀಲಿಸಿದರು. ಕವಿತಾ ಯೋಗಪ್ಪನವರ್, ಶ್ರೀನಿವಾಸ್ ಇದ್ದರು.
Published on

ಶಿವಮೊಗ್ಗ: ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯಗಳಿಗೆ ಅಗತ್ಯವಿರುವ ವಿದ್ಯುತ್ ಮತ್ತು ನೀರಿನ ಸಂಪರ್ಕ ಸೇರಿ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗುವುದು ಎಂದು ಎಂಎಲ್‌ಸಿ ಬಲ್ಕೀಶ್ ಬಾನು ಹೇಳಿದರು.

ಗೋವಿಂದಾಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ವಸತಿ ಸಮುಚ್ಚಯವನ್ನು ಮಹಾನಗರಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಆಯುಕ್ತರು ಮತ್ತು ಇಂಜಿನಿಯರ್‌ಗಳಿಗೆ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಿದರು.

ಮಹಾನಗರ ಪಾಲಿಕೆಯ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗೋವಿಂದಾಪುರದಲ್ಲಿ 260 ಕೋಟಿ ರೂ. ಅನುದಾನದಲ್ಲಿ 3,000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 624 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದೀಗ 652 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಂದು ಪರಿಶೀಲಿಸುತ್ತಾರೆ. ನಂತರ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಮ್ಮುಖದಲ್ಲೇ ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇಲ್ಲಿ 5 ಬೋರ್‌ವೆಲ್ ಮತ್ತು 3 ಟಿಸಿ (ಟ್ರಾನ್ಸ್‌ಫಾರ್ಮರ್)ಗಳನ್ನು ತಾತ್ಕಾಲಿಕವಾಗಿ ಅಳವಡಿಕೆ ಮಾಡಲಾಗಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನೀರಿನ ವ್ಯವಸ್ಥೆ ಆಗುತ್ತಿದೆ. ಸಮುಚ್ಚಯಗಳ ವಿದ್ಯುತ್ ಸಂಪರ್ಕಕ್ಕೆ ಅಗತ್ಯವಿರುವ 12 ಕೋಟಿ ರೂ. ವನ್ನು ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಅನುಮೋದನೆ ಪಡೆದಿದ್ದು ಶೀಘ್ರದಲ್ಲೇ ಕಾಮಗಾರಿ ಕಾರ್ಯಾರಂಭ ಮಾಡಲಾಗುವುದು. ಫೆಬ್ರವರಿ ವೇಳೆಗೆ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಗೋವಿಂದಾಪುರ ಅಗಸನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರಲಿದೆ. ಇಲ್ಲಿ ಪಕ್ಕದಲ್ಲಿಯೇ ಒಂದು ಕೆರೆ ಇದ್ದು ಅದನ್ನು ಸಹ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಎಲ್ಲ ಮೂಲ ಸೌಕರ್ಯಗಳೊಂದಿಗೆ ಇದು ಮಾದರಿ ಬಡಾವಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಎನ್‌ಸಿಸಿ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net