ಕಾಂಗ್ರೆಸ್‌ನಿಂದ ಹಗೆತನದ ರಾಜಕಾರಣ: ಮೇಘರಾಜ್

Megharaj
ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ
Published on

ಶಿವಮೊಗ್ಗ: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೊ ಪ್ರಕರಣವನ್ನು ಕೆದಕುವ ಮೂಲಕ ಹಗೆತನ ಹಾಗೂ ಹೇಡಿತನದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಗಂಭೀರವಾಗಿ ಆರೋಪಿಸಿದರು.

ಮಾ.4ರಂದು ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಅದೇ ದಿನ ಗೃಹ ಸಚಿವ ಡಾ. ಜಿ.ಪರಮೇಶ್ವರ್ ದೂರು ನೀಡಿರುವಾಕೆ ಮಾನಸಿಕ ಅಸ್ವಸ್ಥೆ ಎಂದು ಹೇಳಿಕೆ ನೀಡಿದ್ದರು. ಈಗ ತಮ್ಮ ಮಾತನ್ನು ಮರೆಮಾಚುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಂತ್ರಸ್ತೆ ಪರವಾಗಿ ದೂರು ನೀಡಿದ್ದ ಮಹಿಳೆ ನಿಧನರಾಗಿದ್ದಾರೆ. ಆದರೂ ಯಡಿಯೂರಪ್ಪ ಅವರನ್ನು ಕಟ್ಟಿಹಾಕುವ ಯತ್ನ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ತಲುಪಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಚಾರದಲ್ಲಿ ಸಚಿವರ ತಲೆದಂಡವಾಗಿದೆ. ಇದೆಲ್ಲದರಿಂದ ಜನರ ಗಮನ ಬೇರೆಡೆ ಸೆಳೆಯಲು ಪೋಕ್ಸೊ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ ಎಂದರು.
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪೇ-ಸಿಎಂ ಅಭಿಯಾನ ನಡೆಸಿತ್ತು. ನಮ್ಮ ಪಕ್ಷದಿಂದ ದೂರು ನೀಡಿದ್ದ ಕಾರಣ ಈಗಾಗಲೇ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೋರ್ಟ್ ವಿಚಾರಣೆ ಎದುರಿಸಿದ್ದಾರೆ. ಅದಕ್ಕೆ ಮುಯ್ಯಿ ತೀರಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.
ಬಿಜೆಪಿ ವಿವಿಧ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ಶಿವರಾಜ್, ಪ್ರಮುಖರಾದ ಸಿ.ಎಚ್.ಮಾಲತೇಶ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net