

ಹೊಳೆಹೊನ್ನೂರು: ಮೃತ ಯಜಮಾನನನ್ನು ಹುಡುಕಿಕೊಂಡು ಆಸ್ಪತ್ರೆ ಆವರಣದಲ್ಲಿ ಠಿಕಾಣಿ ಹೂಡಿದ ನಾಯಿಯೊಂದನ್ನು ಹಿಡಿದು ಪಪಂ ಸಿಬ್ಬಂದಿ ನೆರವಿನೊಂದಿಗೆ ತ್ಯಾಜ್ಯ ವಿಲೇವಾರಿ ಜಾಗಕ್ಕೆ ಸ್ಥಳಾಂತರಿಸಲಾಯಿತು.
ಕಳೆದ ಹದಿನೈದು ದಿನಗಳ ಹಿಂದೆ ಎದೆನೋವಿನಿಂದ ಬಳಲುತ್ತಿದ್ದ ಗ್ರಾಮದ ಪಾಲಾಕ್ಷಪ್ಪ ಎಂಬುವವರನ್ನು ಹೊಳೆಹೊನ್ನೂರಿನ ಆಸ್ಪತ್ರೆಗೆ ಕರೆತರಲಾಗಿತ್ತು. ವ್ಯಕ್ತಿಯನ್ನು ತಪಾಸಣೆ ಮಾಡಿದ ವೈದ್ಯರು ಹೃದಯಘಾತವಾಗಿದೆ ಎಂದು ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಕಳಿಸಿದರು. ಮೆಗ್ಗಾನ್‌ನಲ್ಲಿ ವ್ಯಕ್ತಿ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾರೆ.
ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಂದಿಗೆ ಬಂದಿದ್ದ ಸಾಕು ನಾಯಿ ಮಾಲೀಕ ಆಸ್ಪತ್ರೆಯಲ್ಲೆ ಇದ್ದಾರೆಂದು ತಿಳಿದು ಆಸ್ಪತ್ರೆಯ ಆವರಣದಲ್ಲೆ ಠಿಕಾಣಿ ಹೋಡಿತ್ತು. ಪದೇಪದೇ ಆಸ್ಪತ್ರೆ ಒಳ ಬರುವುದು ಕೋಣೆಗಳನ್ನು ಸುತ್ತಿ ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿತ್ತು. ಆಸ್ಪತ್ರೆ ಸಿಬ್ಬಂದಿ ಪಕ್ಕದ ಪಶು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರಬಹುದೆಂದು ಒಂದೆರಡು ಬಾರಿ ನಾಯಿಯನ್ನು ಓಡಿಸಿದ್ದಾರೆ. ಹೃದಯಘಾತದಿಂದ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಿಬ್ಬಂದಿಯೊಬ್ಬರು ನಾಯಿಯನ್ನು ಗುರುತಿಸಿ ಮೃತ ವ್ಯಕ್ತಿಯ ಕುಟುಂಬಸ್ಥರೊಂದಿಗೆ ಇದೆ ನಾಯಿ ಬಂದಿದ್ದಾಗಿ ಗುರುತು ಹೇಳಿದ್ದಾರೆ. ಒಂದೆರಡು ದಿನ ಕಳೆದಂತೆ ಆಸ್ಪತ್ರೆ ಆವರಣದಲ್ಲಿ ನಾಯಿ ಉಪಟಳ ಹೆಚ್ಚಾಗಿದೆ. ಆಸ್ಪತ್ರೆಗೆ ಒಳಗೆ ಬಂದಾಗ ಯಾರಾದರೂ ಓಡಿಸಿದರೆ ಜೋರಾಗಿ ಬೊಗಳುವುದಕ್ಕೆ ಹಾಗೂ ಅವರ ಮೇಲೆರಗಲು ಶುರುಮಾಡಿತ್ತು.
ಮುಂಜಾಗ್ರತ ಕ್ರಮವಾಗಿ ಡಾ.ದೇವಾನಂದ್ ಆಸ್ಪತ್ರೆ ಆವರಣದಿಂದ ಜಾಗ ಬಿಟ್ಟು ಹೋಗದ ನಾಯಿಯನ್ನು ಹಿಡಿದುಕೊಂಡು ಹೋಗುವಂತೆ ಪಪಂ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದಾರೆ. ಪಪಂ ಮುಖ್ಯಾಧಿಕಾರಿ ಮಂಜುನಾಥ್ ಪಶು ಆಸ್ಪತ್ರೆ ವೈದ್ಯರ ಸಹಕಾರ ಕೇಳಿದ್ದಾರೆ. ನಾಯಿಯ ಚಲನವಲನ ವೀಕ್ಷಿಸಿದ ಪಪಂ ಕೆಲ ಸಿಬ್ಬಂದಿ ಸಾಕು ನಾಯಿ ಎಂದು ದೃಢಪಡಿಸಿಕೊಂಡು ನಾಯಿಯನ್ನು ಸುರಕ್ಷಿತವಾಗಿ ಹಿಡಿದು ಪಪಂ ತ್ಯಾಜ್ಯ ವಿಲೇವಾರಿ ಘಟಕದ ನಾಯಿಗಳ ಗುಂಪಿನೊಂದಿಗೆ ಬಿಟ್ಟು ತಿನ್ನಲು ಒಂದಷ್ಟು ಆಹಾರವನ್ನು ನೀಡಿದ್ದಾರೆ.