ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ರಾಜ್ಯಾದ್ಯಂತ ಯೂರಿಯಾ ಕೊರತೆ ಇದ್ದು, ಜಿಲ್ಲೆಯಲ್ಲೂ ರಸಗೊಬ್ಬರಕ್ಕಾಗಿ ರೈತರ ಪರದಾಟ ಇನ್ನೂ ನಿಂತಿಲ್ಲ. ಹೀಗಿದ್ದರೂ ಉಳ್ಳವರ ಮನೆಗಳಿಗೆ ಮಾತ್ರ ಯೂರಿಯಾ ಗೊಬ್ಬರ ಸರಬರಾಜು ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.
ಕೃಷಿ ಸಹಕಾರ ಸಂಘಗಳಲ್ಲಿ ಟೋಕನ್ ವ್ಯವಸ್ಥೆಯಲ್ಲಿ ರಸಗೊಬ್ಬರ ಮಾರಾಟ ಆಗುತ್ತಿವೆ. ಆದರೆ, ಉಳ್ಳವರ ಮನೆಗಳಿಗೆ ಮೊದಲು ಕಳುಹಿಸಿ, ನಂತರ ಸಾಮಾನ್ಯ ರೈತರಿಗೆ ಒಂದೆರಡು ಚೀಲ ಗೊಬ್ಬರ ವಿತರಿಸಲಾಗುತ್ತಿದೆ. ಅಲ್ಲದೇ ಇನ್ನೂ ಕೆಲವರು ಖಾಸಗಿ ಅಂಗಡಿಯವರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಅಗತ್ಯ ಇರುವವರಿಗೆ 350-500 ರೂ. ವರೆಗೆ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿವೆ.
ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹಡಗಲಿ ತಾಲೂಕುಗಳಲ್ಲಿ ಯೂರಿಯಾ ಕೊರತೆ ಕಾಡುತ್ತಿದೆ. ರೈತರು ರಾತ್ರಿಯಿಡಿ ರಸಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಸರದಿಯಲ್ಲಿ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖವಾಗಿ ಮೆಕ್ಕೆಜೋಳ ಬೆಳೆದ ರೈತರು ರಸಗೊಬ್ಬರಕ್ಕೆ ಹಾತೊರೆಯುವಂತಾಗಿದೆ.
ಕೃಷಿ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 25 ಸಾವಿರ ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿದೆ. ಅದರೂ 14 ಸಾವಿರ ಟನ್ ಹೆಚ್ಚುವರಿಯಾಗಿ ಈವರೆಗೆ ಒಟ್ಟು 39 ಸಾವಿರ ಟನ್ ಗೊಬ್ಬರ ವಿತರಿಸಲಾಗಿದೆ. ಅಲ್ಲದೇ ಸೆ.7 ರಂದು ಹೊಸಪೇಟೆಗೆ 50 ಟನ್ ಹಾಗೂ ಹಗರಿಬೊಮ್ಮನಹಳ್ಳಿಗೆ 150 ಟನ್ ಗೊಬ್ಬರ ಬರಲಿದ್ದು, ಬಾಕಿ ತಾಲೂಕುಗಳಿಗೆ ತಲಾ 100 ಟನ್ ರಸಗೊಬ್ಬರ ಕೆಲವೇ ದಿನಗಳಲ್ಲಿ ಬರಬೇಕಿದೆ. ಅಷ್ಟು ಪೂರೈಕೆಯಾದರೆ ಗೊಬ್ಬರ ಕೊರತೆ ನೀಗಿಸಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಹೆಚ್ಚುವರಿ ಬಿತ್ತನೆಯಿಂದ ಅಭಾವ ಸೃಷ್ಟಿ
ಜಿಲ್ಲೆಯಲ್ಲಿ ಒಟ್ಟು 2.78 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಶೇ.100 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಮೆಕ್ಕೆಜೋಳ ಒಂದೇ 1.91 ಹೆಕ್ಟೇರ್ ಗುರಿ ಪೈಕಿ 2.20 ಲಕ್ಷ ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಗುರಿಗಿಂತ ಶೇ.15.2ರಷ್ಟು ಹೆಚ್ಚು ಬಿತ್ತನೆಯಾದ ಕಾರಣ ಯೂರಿಯಾ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಉತ್ತಮ ಮಳೆಯಾಗಿದ್ದರಿಂದ ಮೆಕ್ಕೆಜೋಳಕ್ಕೆ ಯೂರಿಯಾ ಗೊಬ್ಬರ ಪೂರೈಕೆ ಹೇರಳವಾಗಿ ಬೇಕು. ಅಲ್ಲದೇ ಉಳ್ಳವರಿಗೆ ಅಧಿಕ ಗೊಬ್ಬರ ಸರಬರಾಜು ಆಗುತ್ತಿರುವುದರಿಂದ ಸಾಮಾನ್ಯ ರೈತರು ಪರದಾಡುವಂತಿದೆ. ಅಲ್ಲದೇ ಬೇರೆ ಜಿಲ್ಲೆಗೆ ಹೋಗಿ ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೋ ಸ್ಟಾಕ್ ನಾಳೆ ಬನ್ನಿ
ಮುಕ್ಕಾಲು ಭಾಗ ಖುಷಿ ಹಾಗೂ ಕಾಲು ಭಾಗ ನೀರಾವರಿ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿಗ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರಿತಪಿಸುತ್ತಿದ್ದು, ಬಹುತೇಕ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿದೆ. ಖಾಸಗಿ ರಸಗೊಬ್ಬರ ಅಂಗಡಿಗಳು ಹಾಗೂ ಕೃಷಿ ಸಹಕಾರ ಸಂಘಗಳ ಎದುರು ನಿತ್ಯ ಬೆಳಗ್ಗೆ 4 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತರೂ ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ
ಮುಂಗಾರು ಉತ್ತಮವಾಗಿ ಸುರಿದ ಕಾರಣಕ್ಕೆ ಈ ವರ್ಷ 30 ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಸಹಜವಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈತರು ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ, ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ ಬಳಕೆ ಮಾಡಬೇಕು.
| ಟಿ.ಡಿ.ಮಂಜುನಾಥ ಕೃಷಿ ಜಂಟಿ ನಿರ್ದೇಶಕ,