

ಹೊಸಪೇಟೆ: ಚಳಿಗಾಲದ ಆರಂಭದಲ್ಲೇ ದಶಕಗಳಲ್ಲೇ ಕಾಣದ ಚಳಿಯ ಅನುಭವ ಜನ ಪಡೆದಿದ್ದಾರೆ. ಉಷ್ಣಾಂಶದ ಪ್ರಮಾಣ ಇಳಿಮುಖವಾಗಿದ್ದು, ಮೈ ಕೊರೆಯುವ ಚಳಿ ಜನರನ್ನು ಅಕ್ಷರಶಃ ನಡುಗುವಂತೆ ಮಾಡಿದೆ. ಮಂಜು ಆವರಿದ ವಾತವರಣದಿಂದ ಸೂರ್ಯೋದಯ ಕಾಣದಂತಾಗಿದ್ದಾರೆ.
ಈ ಬಾರಿ ಮಳೆ ಹೆಚ್ಚು ಆಗಿ ಭೂಮಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ ಈ ವರ್ಷ ಚಳಿ ಹೆಚ್ಚಾಗುತ್ತಿದೆ. ಶೀತಗಾಳಿಯಿಂದ ಬೆಳಗ್ಗೆ ಮತ್ತು ಮುಸ್ಸಂಜೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಹಿತ ವಿವಿಧೆಡೆ ನಿತ್ಯ ನೂರಾರು ಮಂದಿ ಬೆಳಿಗ್ಗೆ, ಸಂಜೆ ನಡೆಯಲು ಬರುತ್ತಾರೆ. ಆದರೆ, ಚಳಿ ತೀವ್ರವಾದಾಗಿನಿಂದ ವಿಹಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಥರಗುಟ್ಟುವ ಚಳಿಯಿಂದ ರಕ್ಷಣೆ ಪಡೆಯಲು ಕೆಲವರು ಬೆಳಗಿನ ವೇಳೆ ಬೀದಿ ಬದಿಯಲ್ಲಿ ಕಾಗದ–ಪ್ಲಾಸ್ಟಿಕ್, ಕಸದಿಂದ ಗುಡ್ಡೆಗಳಿಗೆ ಬೆಂಕಿ ಹೊತ್ತಿಸಿ, ದೇಹ ಬೆಚ್ಚಗೆ ಮಾಡಿಕೊಳ್ಳುತ್ತಾರೆ.
ರಾಜ್ಯದೆಲ್ಲೆಡೆ ಮೈಕೊರೆಯುವ ಚಳಿ ಮೀತಿ ಮೀರಿದೆ. ಹೊರಗಡೆ ಕಾಲಿಡಬೇಕು ಅಂದರೂ ಶಟರ್, ಟೋಪಿ ಧರಿಸಿದೆ ಹೊರಗಡೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಡಗಳಿಲ್ಲದ ಶುಭ್ರ ಆಕಾಶ, ಮಾಯವಾದ ಮಂಜು, ನಿಧಾನ ಬೀಸುವ ಒಣ ಹವೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಿಸಿದ್ದು ಮನುಷ್ಯರನ್ನಲ್ಲದೆ ಪ್ರಾಣಿ ಪಕ್ಷಿಗಳನ್ನೂ ಹೈರಾಣಾಗಿಸಿದೆ. ಈ ಬಾಗದಲ್ಲಿ ಪ್ರತಿನಿತ್ಯ ಕಾರ್ಮಿಕರು ಬೆಳಗಿನ ಜಾವ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಬೆಳಗಿನ ಚುಮು ಚುಮು ಚಳಿ, ತಣ್ಣನೆ ಗಾಳಿ ವಾತಾವರಣದಲ್ಲಿ ವಾಹನಗಳಲ್ಲಿ ತೆರಳಬೇಕು. ‘ವಾರದಿಂದ ಚಳಿ ಹೆಚ್ಚಾಗಿದೆ. ಶೀತ ವಾತಾವರಣದಲ್ಲಿ ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಸ್ವೆಟರ್ ಧರಿಸಿ, ತಲೆಗೆ ಬಟ್ಟೆ ಕಟ್ಟಿಕೊಂಡು ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ.
ಸೂರ್ಯಾಸ್ತಕ್ಕೂ ಮೊದಲೇ ಆರಂಭವಾಗುವ ಚಳಿ ಮಧ್ಯರಾತ್ರಿ ವೇಳೆಗೆ ತೀವ್ರತೆ ಪಡೆದುಕೊಂಡು ಬೆಳಗ್ಗೆ ಹೊತ್ತೇರುವವರೆಗೂ ದೇಹವನ್ನು ಮರಗಟ್ಟಿಸುತ್ತಿದೆ. ಚಳಿಗಾಲದಲ್ಲಿ ವಾತಾವರಣದಲ್ಲಿ ಕವಿಯುವ ಮಂಜು ತೇವಾಂಶ ಹಿಡಿದಿಟ್ಟು ತೀವ್ರ ತರಹದ ಚಳಿಗೆ ಅಡ್ಡ ಗೋಡೆಯಾಗುತ್ತದೆ. ಆದರೆ, ಕಳೆದ ಒಂದು ವಾರದಿಂದ ಉತ್ತರದ ಶೀತ ಮಾರುತಗಳು ಮೋಡಗಳನ್ನು ಚದುರಿಸಿ ವಾತಾವರಣದಲ್ಲಿ ತೇವಾಂಶವನ್ನು ಇಲ್ಲದಂತೆ ಮಾಡಿವೆ. ಒಣ ಹವೆಯಿಂದಾಗಿ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ, 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ವರೆಗೆ ಮಂಜು ಆವರಿಸಿದ ವಾತವರಣವಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವಿಪರೀತ ಹೆಚ್ಚಿರುವ ಚಳಿ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳನ್ನು ತಂದೊಡ್ಡಿದರೆ, ಹೃದ್ರೋಗ ಇರುವವರ ಪಾಲಿಗೆ ಯಮನಂತೆ ಕಾಡುತ್ತದೆ. ಚಳಿಯಿಂದಾಗಿ ಸೂಕ್ಷ್ಮಾಣು ಜೀವಿಗಳ ಪ್ರಸರಣ ಕಡಿಮೆಯಾಗುವುದು ಇದಕ್ಕೆ ಕಾರಣ. ಈ ಸಲ ಅತಿ ಚಳಿ ಮತ್ತು ಶುಷ್ಕ ಹವೆಯಿಂದಾಗಿ ರಾಜ್ಯಾದ್ಯಂತ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳ ಪ್ರಮಾಣ ಶೇ.40ರಷ್ಟು ಅಧಿಕವಾಗುವ ಸಾಧ್ಯತೆ ಇದೆ. ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಸಹಜವಾಗಿಯೇ ತೊಂದರೆಗಳು ಹೆಚ್ಚುತ್ತವೆ. ಹೃದಯಾಘಾತ, ಸ್ಟ್ರೋಕ್‌ನಂತಹ ತೊಂದರೆಗಳು ಅಧಿಕವಾಗುತ್ತವೆ. ಚಳಿಯಿಂದ ಎಚ್ಚರದಿಂದ ಇರಬೇಕು ಎನ್ನುತ್ತಾರೆ ತಜ್ಞ ವೈದ್ಯರು.