

ಹೊಸಪೇಟೆ: ಕನ್ನಡ ನಾಡಿಗೆ ಮತ್ತು ವೀರಶೈವ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ ಜೀವನವನ್ನೆ ತಾಗ್ಯ ಮಾಡಿದ ತ್ಯಾಗಿವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತಿಯನ್ನು ನಗರದ ಸಾಯಿ ಲೀಲಾರಂಗ ಮಂದಿರದಲ್ಲಿ ಜ.10ರಂದು ಆಚರಿಸಲಾಗುತ್ತದೆ ಎಂದು ಅಖಲಿ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ.ಬಿ.ಶ್ರೀನಿವಾಸ್ ರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಸಂಗಿ ಲಿಂಗರಾಜ ದೇಸಾಯಿ ಜಯಂತಿ ರಾಜ್ಯಮಟ್ಟದ ಕಾರ್ಯಕ್ರಮ ಮೊದಲಬಾರಿ 2021ರದಲ್ಲಿ ಬೆಂಗಳೂರಿನಲ್ಲಿ ನಡೆಸಲಾಯಿತು. ನಂತರ 2023ರಲ್ಲಿ ಧಾರವಾಡ, 2024ರಲ್ಲಿ ಕಲಬುರಗಿಯಲ್ಲಿ ನಡೆಸಲಾಗಿದೆ. ನಾಲ್ಕನೇ ಜಯಂತಿಯನ್ನು ನಗರದಲ್ಲಿ ಜ.10ರಂದು ಆಚರಣೆ ಮಾಡಲಾಗುತ್ತದೆ. ನಗರದ ಕೊಟ್ಟೂರು ಸಂಸ್ಥಾನ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನಂದಿಪುರ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಲಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಾನಪದ ಸಾಹಿತಿ ಡಾ.ಶಂಭು ಬಳಿಗಾರ ಉಪನ್ಯಾಸ ನೀಡಲಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ, ಶಿವರಾಜ್ ಎಸ್.ತಂಗಡಗಿ, ಕೃಷ್ಣಭೈರೆಗೌಡ, ಸಂಸದರಾದ ಈ.ತುಕಾರಾಮ, ರಾಜಶೇಖರ ಹಿಟ್ನಾಳ ಇತರರು ಭಾಗವಹಿಸಲಿದ್ದಾರೆ ಎಂದರು.
ಅಖಿಲ ಭಾರತ ಲಿಂಗಾಯರ ಕುಡವಕ್ಕಲಿಗ ಮಹಾಸಭಾದ ಕೋಶಾಧ್ಯಕ್ಷ ಎ.ಎಸ್.ಪಾಟೀಲ್ ಮಾತನಾಡಿ, ಸಂಘಟನೆಯೇ ಅಭಿವೃದ್ಧಿಯ ಹೆದ್ದಾರಿ ಎಂದರಿತ ಲಿಂಗರಾಜರು, ಲಿಂಗಾಯಿತ ಸಂಘಟನೆಯ ಪ್ರಥಮ ರೂವಾರಿ ಎನಿಸಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಹಾನಗಲ್ ಕುಮಾರಸ್ವಾಮಿಗಳ ಆಶೀರ್ವಾದದ ಮೂಲಕ ಸ್ಥಾಪಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ, ಜಗತ್ ಪ್ರಸಿದ್ಧ ಕೆಎಲ್‌ಇ ಸಂಸ್ಥೆಗೆ ಆಸ್ತಿಭಾರ ಹಾಕಿದವರೇ ಇವರು ಎಂದು ಇತಿಹಾಸದಿಂದ ತಿಳಿಯುತ್ತದೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕೇವಲ ಸಮಾಜದವರು ಆಚರಿಸಿದರೆ ಸಾಲದು, ಸರ್ಕಾರವೇ ಇವರ ಜಯಂತಿ ಆಚರಿಸುವ ಮೂಲಕ ಶಿರಸಂಗಿ ಲಿಂಗರಾಜ ದೇಸಾಯಿ ಅವರ ಸಂಪೂರ್ಣ ಪರಿಚಯ ನಾಡಿಗೆ ಮಾಡಿಕೊಡಬೇಕು ಹಾಗೂ ಅವರಿಗೆ ಗೌರವಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕಾಳಗಟ್ಟಿ ಶಿವಪ್ರಕಾಶ್ ಗೌಡ, ಜೆ.ಬಸವರಾಜ್, ಎಂ.ಜಿ.ಗಚ್ಚಣ್ಣನವರ್, ರವಿಂದ್ರ ಕುಡಒಕ್ಕಲಿಗ, ಬಿ.ಬಿ.ಪಾಟೀಲ್, ಎ.ಮಂಜುನಾಥ, ನೀಲಕಂಠ ಇದ್ದರು.