ಶಾಲಾ ವಾಹನಗಳಿಂದ ಚಿಣ್ಣರಿಗೆ ಕುತ್ತು

15 MANJU 01
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುತ್ತಿರುವ ಪೋಷಕರು ಒಮ್ಮೆ ಯೋಚಿಸಬೇಕಾಗಿದ್ದು, ಶಾಲೆಗೆ ತೆರಳುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಾಗಿ ಸರ್ಕಾರ ಹಲವಾರು ಕ್ರಮ ಕೈಗೊಂಡಿದ್ದರೂ, ಬೇಜವಾಬ್ದಾರಿತನದಿಂದಾಗಿ ಶಾಲಾ ವಾಹನಗಳೇ ಮಕ್ಕಳಿಗೆ ಯಮಪಾಶವಾಗಿ ಪರಿಣಮಿಸಿವೆ.

ಮಕ್ಕಳ ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವ ಶಾಲಾ ವಾಹನಗಳ ಚಾಲಕರು ತಮ್ಮ ಬೇಜವಾಬ್ದಾರಿ ತನದಿಂದಾಗಿ ಮಕ್ಕಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಚಲಿಸುವ ವಾಹನದಿಂದ ಬಿದ್ದು ಈ ಹಿಂದೆ ಜಿಲ್ಲೆಯಲ್ಲಿ ಸಾಕಷ್ಟು ದುರ್ಘಟನೆಗಳು ಸಂಭವಿಸಿವೆ. ಇದೇ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ಘಟಿಸುತ್ತಲೇ ಇದ್ದು, ಸಾಕಷ್ಟುಪ್ರಾಣ ಹಾನಿಗೂ ಕಾರಣವಾಗಿದೆ. ಏಕಾಏಕಿ ಈ ರೀತಿ ಘಟನೆಗಳು ಜರುಗಿದರೆ, ಆಯಾ ಶಾಲೆಗಳ ಆಡಳಿತ ಮಂಡಳಿಯನ್ನು ನೇರ ಹೊಣೆಯನ್ನಾಗಿಸಲಾಗುತ್ತಿದೆ. ಹಾಗಾಗಿ ಚಾಲಕರನ್ನು ನೇಮಕ ಮಾಡಿಕೊಳ್ಳುವ ವೇಳೆ ಶಾಲಾ ಆಡಳಿತ ಮಂಡಳಿಯ ಪಾತ್ರವೂ ಮಹತ್ವದ್ದಾಗಿದ್ದು, ಸರ್ಕಾರ ಮಕ್ಕಳ ಸುರಕ್ಷತೆಗಾಗಿ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಸಣ್ಣ ಮಕ್ಕಳ ವಿಚಾರದಲ್ಲಿ ಆ ಎಲ್ಲ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದು ಶಾಲೆಗಳ ಆದ್ಯ ಕರ್ತವ್ಯ ಆಗಬೇಕಿದೆ. ಖಾಸಗಿ ಶಾಲೆಗಳಲ್ಲಿ ಈ ನಿಯಮ ಗಾಳಿಗೆ ತೂರಿ ಶಾಲಾ ವಾಹನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಶಾಲೆಗಳ ವಿರುದ್ಧ ಸಾರಿಗೆ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ಆದರೂ, ಶಾಲಾ ವಾಹನಗಳ ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪಗಳಿವೆ.

ಶಾಲಾ ವಾಹನ, ಆಟೋರಿಕ್ಷಾ ಮತ್ತಿತರ ವಾಹನಗಳಲ್ಲಿ ಮಿತಿಮೀರಿ ವಿದ್ಯಾರ್ಥಿಗಳನ್ನು ತುಂಬಿಸುತ್ತಿರುವ ಮತ್ತು ಅತಿ ವೇಗದಿಂದ ಸಂಚರಿಸುತ್ತಿರುವ ಬಗ್ಗೆ ಅನೇಕ ದೂರುಗಳಿವೆ. ಅಧಿಕಾರಿಗಳ ಕಾರ್ಯಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಲಿ. ನಿರಂತರವಾಗಿ ನಡೆಯುತ್ತಿರಬೇಕು. ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿರುವ ಬಸ್, ಆಟೋರಿಕ್ಷಾ ಮತ್ತು ಶಾಲಾ ವಾಹನಗಳನ್ನು ತಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು.

ತಪಾಸಣೆ ಇಲ್ಲ

ಸಾಮಾನ್ಯವಾಗಿ ಶಾಲಾ ವಾಹನಗಳಲ್ಲಿ ಚಾಲಕರ ವಿವರ ತಪಾಸಣೆ ಮಾಡುವುದೇ ಇಲ್ಲ. ಚಾಲಕರಿಗೆ ವಾಹನ ಚಾಲನಾ ಪರವಾನಗಿ ಇದೆಯೇ? ಮದ್ಯಪಾನ ಮಾಡಲಾಗಿದೆಯೇ? ಹೇವಿ ಬ್ಯಾಡ್ಜ್ ಹೊಂದಿದಾನೇದು? ಜತೆಗೆ ಸರ್ಕಾರಿ ನಿಯಮಗಳನ್ನು ಪಾಲನೆ ಮಾಡಲಾಗಿದೆಯೇ ಎಂಬುದರ ಕುರಿತು ಪೊಲೀಸರು ತಪಾಸಣೆ ಮಾಡುವುದೇ ಇಲ್ಲ. ಹಾಗಾಗಿ ಇಂತಹ ಅವಘಡಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಸರ್ಕಾರದ ನಿಯಮಗಳೇನು?

ಶಾಲಾ ವಾಹನಗಳು ನಡೆಸಲು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಹಾಗೂ ಸಾರಿಗೆ ಇಲಾಖೆ ಒಂದಷ್ಟು ನಿದುಮಗಳನ್ನು ಜಾರಿಗೆ ತಂದಿದೆ. ಪ್ರಕರಣವಾಗದಂತೆ ಪ್ಯಾನಿಕ್ ಬಟನ್ ಅಳವಡಿಕೆ ಮಾಡಿರಬೇಕು. ಶಾಲಾ ವಾಹನಕ್ಕೆ ಜಿಪಿಎಸ್ ಅಳವಡಿಸಿರಬೇಕು. ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಒಬ್ಬ ಸಹಾಯಕರನ್ನು ನೇಮಕ ಮಾಡಬೇಕು. ಚಾಲಕ ಕಡ್ಡಾಯವಾಗಿ ಹೇವಿ ಬ್ಯಾಡ್ಜ್ ಹೊಂದಿರಬೇಕು.

ಯಾರು ಹೊಣೆ?

ಏಕಾಏಕಿ ಅನಾಹುತಗಳಾದರೆ ಯಾರು ಹೊಣೆ ಎಂಬ ಮಾತು ಕೇಳಿ ಬರುತ್ತಿದೆ. ತಮ್ಮದಲ್ಲದ ತಪ್ಪಿಗೆ ಮಕ್ಕಳು ಶಿಕ್ಷೆ ಅನುಭವಿಸುವಂತೆ ಆಗುತ್ತದೆ. ಪಾಲಕರು ಹಲವಾರು ಕನಸುಗಳನ್ನು ಕಂಡು ಮಕ್ಕಳನ್ನು ಶಾಲೆಗೆ ಸೇರಿಸಿರುತ್ತಾರೆ. ಈ ರೀತಿ ಘಟನೆ ಜರುಗಿದರೆ ಪೋಷಕರ ಕುಟುಂಬ ಹಾಗೂ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ಸರ್ಕಾರ ಹಾಗೂ ಸಾರಿಗೆ ಇಲಾಖೆ ನಿಯಮ ಮೀರಿ ಕೆಲವು ಖಾಸಗಿ ಶಾಲೆ ಆಡಳಿತ ಮಂಡಳಿಗಳು ಶಾಲಾ ವಾಹನ ನಡೆಸುವರಿಗೆ ನೋಟಿಸ್ ನೀಡಿದ್ದೇವೆ. ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಹಲವು ಶಾಲೆಗಳ ಮುಖ್ಯಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ಇನ್ನೂ ಕೆಲ ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಕೆ.ದಾಮೋದರ್, ಆರ್‌ಟಿಒ, ಸಾರಿಗೆ ಇಲಾಖೆ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net