ಮಳೆಗಾಲ ನಿವಾಸಿಗಳಿಗೆ ಆಪತ್ತು

16 MANJU 01
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ಮಳೆಗಾಲ ಶುರುವಾದರೆ ಸಾಕು ನಗರಸಭೆ ವ್ಯಾಪ್ತಿಯಲ್ಲಿ ಜನರು ನಿದ್ದೆ ಮಾಡುವುದೇ ಕಷ್ಟ, ಸಾಧಾರಣ ಮಳೆ ಬಂದರೂ, ಕೊಳಚೆ ಪ್ರದೇಶದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿ, ಜನಜೀವನಕ್ಕೆ ಅಡ್ಡಿಯಾಗುತ್ತದೆ. ನಗರದ ಎಸ್.ಆರ್.ನಗರ, ಚಪ್ಪರದಳ್ಳಿ, ರಾಯರ ಮಠ, ವಿಜಯ ಟಾಕೀಸ್, ರೈಲ್ವೆ ಪ್ರದೇಶ, ರಾಣಿಪೇಟೆ, ಚಿತ್ರವಾಡಿ, ಹುಡಾ ಕಚೇರಿ ಪ್ರದೇಶ ಸೇರಿ ಬಹುತೇಕ ಪ್ರದೇಶಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ವಿಷ ಜಂತುಗಳು ಹಾವಳಿ ಹೆಚ್ಚಿದೆ. ವಿಷ ಜಂತುಗಳಿಂದ ಕಚ್ಚಿಸಿಕೊಂಡು ರಾತ್ರಿ ಹೊತ್ತು ಆಸ್ಪತ್ರೆಗೆ ಅಲೆದಾಡಿದ ನಿದರ್ಶನಗಳೂ ಇವೆ. ಪ್ರತಿ ವರ್ಷ ಮಳೆ ಬಂದಾಗ ತಗ್ಗು ಪ್ರದೇಶದ ನಿವಾಸಿಗಳು ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿದೆ. ಅವಾಂತರ ಸೃಷ್ಟಿ ಆಗುವಾಗ ಮಾತ್ರ ಜನಪ್ರನತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆ ಸಮಯಕ್ಕೆ ಬ್ಲಾಕ್ ಆಗಿರುವ ಚರಂಡಿ ದುರಸ್ತಿಗೊಳಿಸುತ್ತಾರೆ. ನಂತರದಲ್ಲಿ ಯಾರೂ ಇತ್ತ ತಲೆ ಹಾಕುವುದಿಲ್ಲ ಎಂದು ನಿವಾಸಿಗಳ ಆರೋಪ, ಇತ್ತೀಚಿಗೆ ಸುರಿದ ಮಳೆಯಿಂದಾಗಿ ತಗ್ಗಿನ ಕೊಳಚೆ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅಸ್ತವ್ಯಸ್ತಗೊಳಿಸಿತು. ಸ್ಥಳೀಯ ನಗರಸಭೆ ಮೌನ ವಹಿಸಿದೆ. ಪ್ರತಿ ಮಳೆಗಾಲ ಬಂದಾಗೊಮ್ಮೆ ಭೇಟಿ ನೀಡಿ ಸಾಂತ್ವನ ಹೇಳುವ ಜನಪ್ರತಿನಿಧಿಗಳು ಮತ್ತೆ ಬರುವುದು ಮಳೆಗಾಲ ಬಂದಾಗಲೇ. ಹೀಗಾಗಿ ಇಲ್ಲಿ ಸಮಸ್ಯೆ ಜಟಿಲವಾಗಿದೆ.

ಅವೈಜ್ಞಾನಿಕ ಕಾಮಗಾರಿ

ನಗರದಲ್ಲಿ ರೈಲು ಬೋಗಿಯಂತೆ ಒಂದಕ್ಕೊಂದು ಹೊಂದಿಕೊಂಡು ಮನೆಗಳು ನಿರ್ಮಾಣವಾಗಿವೆ. ಇಲ್ಲಿನ ನಿವಾಸಿಗಳಿಗೆ ಸಂಚರಿಸಲು ಸರಿಯಾದ ದಾರಿ ಇಲ್ಲ. ಅಕ್ಕಪಕ್ಕದ ಮನೆಗಳ ಎದುರಿಗೆ ಮೂರು ಅಡಿ ಅಗಲದ ಚರಂಡಿಯೇ ಇವರಿಗೆ ದಾರಿ. ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತವೆ. ಚರಂಡಿ ಕಾಮಗಾರಿಯಂತೂ ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ, ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುವುದಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ

ಒಂದು ವಾರ ದುರ್ನಾಲೆ

ರಾತ್ರಿ ಮಳೆ ಬಂದರೆ ರಾತ್ರಿಯಲ್ಲ ಜಾಗರಣೆ ಮಾಡುವ ಅನಿವಾರ್ಯ ಇದೆ. ಬರೀ ಮಳೆ ನೀರು ಬಂದರೆ ಸಹಿಸಿಕೊಳ್ಳಬಹುದು. ಅದರ ಜತೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ. ಮಳೆ ಬಂದು ಹೋದ ವಾರ ಕಾಲ ತ್ಯಾಜ್ಯದ ದುರ್ನಾತ ಜೀವಂತ ಇರಲಿದೆ ಎಂಬ ಮಾತುಗಳು ನಿವಾಸಿಗಳಿಂದ ವ್ಯಕ್ತವಾಗಿದೆ.

ಎಸ್.ಆರ್.ನಗರ ಸೇರಿ ಇತರೆ ಕಡೆ ಚರಂಡಿ ಸಮಸ್ಯೆ ಇದ್ದು, ದುರಸ್ತಿ ಕಾರ್ಯಕ್ಕೆ ಯೋಜನೆ ರೂಪಿಸಲಾಗುತ್ತದೆ. ರಾಣಿಪೇಟೆಯಲ್ಲಿ ಚರಂಡಿ ಬ್ಲಾಕ್ ಆಗಿ ಈ ವರ್ಷ ಸಮಸ್ಯೆಯಾಗಿದೆ. ಮಳೆಗಾಲ ನಂತರ ವಿಶೇಷ ರೂಪಿಸಿ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ. | ಶಿವಕುಮಾರ್ ನಗರಸಭೆ ಪೌರಾಯುಕ್ತ, ಹೊಸಪೇಟೆ

ಮಳೆ ಬಂದರೆ ಸಾಕು ಮನೆಯೊಳಗೆ ನೀರು ಬರುತ್ತವೆ. ಕೆಲವೊಮ್ಮೆ ಉಪವಾಸ ಬೀಳುವ ಪ್ರಸಂಗವೂ ಬಂದಿದೆ. ರಾತ್ರಿ ನಿರಂತರವಾಗಿ ಮಳೆ ಸುರಿದರೆ ಮನೆ ತೊರೆದು ಬೇರೆಡೆ ಹೋಗಿ ಆಶ್ರಯ ಪಡೆಯಬೇಕು. ಮಳೆ ಬಂದರೆ ಮಾತ್ರ ತಲೆಕೊಡಿಸಿಕೊಳ್ಳುವ ಅಧಿಕಾರಿಗಳು, ಶಾಶ್ವತ ಪರಿಹಾರ ನೀಡಬೇಕು. | ಖಲಂದರ್ ಹೊಸಪೇಟೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net