ಹೊಸಪೇಟೆ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಆರಂಭಗೊಂಡ ತುಂತುರು ಮಳೆ ನಿರಂತವಾಗಿ ಸುರಿಯುತ್ತಿದೆ.
ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಾದ ಕಮಲಾಪುರ, ಮರಿಯಮ್ಮನಹಳ್ಳಿ, ಮಲಪನಗುಡಿ, ಗಾದಿಗನೂರು, ಪಾಪಿನಾಯಕನಹಳ್ಳಿ ಇತರೆ ಕಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಗುರುವಾರ ಭಾಗದಲ್ಲಿ ಜೋರು ಮಳೆ ಸುರಿದಿದ್ದರಿಂದ ಚಳಿಯ ವಾತಾವರಣ ನಿರ್ಮಾಣವಾಗಿದೆ. ಮಳೆಯ ನಡುವೆಯೇ ಕೆಲ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ತರಕಾರಿ, ಹೂವು, ಹಣ್ಣು ವ್ಯಾಪಾರಕ್ಕೆ ಹೊಡೆತ ಬಿತ್ತು. ನಗರದ ರಸ್ತೆಗಳಲ್ಲಿ ನೀರು ನಿಂತು ಜನ ಸಂಚಾರಕ್ಕೆತೊಂದರೆ ಉಂಟಾಯಿತು.
ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಇದರಿಂದ ಸ್ವೆಟರ್, ಜರ್ಕಿನ್, ಕೈಗವಸುಗಳನ್ನು ಹೊರತೆಗೆದು ಧರಿಸಿಕೊಂಡ ಜನರು, ಚಳಿಯಿಂದ ರಕ್ಷಿಸಿಕೊಂಡು ಬೆಚ್ಚಗಾದರು. ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ತುಂತುರು ಮಳೆಗೆ ಸಂಚರಿಸಲು ವಾಹನ ಸವಾರರು ಹರಸಾಹಸಪಟ್ಟರು. ಸಾಕಷ್ಟು ಜನ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ಬಿಡುವಿಲ್ಲದೇ ಸುರಿದ್ದಿದ್ದರಿಂದ ಅನಿವಾರ್ಯವಾಗಿ ಮಳೆಯಲ್ಲೆ ಮನೆಗೆ ತೆರಳಿದರು. ಗ್ರಾಮೀಣ ಪ್ರದೇಶಗಳಲ್ಲಿನ ಹಾಳಾದ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡು ರಸ್ತೆಗಳು ಕೆಸರುಗದ್ದೆಯಂತಾಗಿ ಮಾರ್ಪಾಡಾಗಿದೆ. ರಸ್ತೆ ಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.