ಹೊಸಪೇಟೆ ನಗರಸಭೆ ಮೇಲ್ದರ್ಜೆಗೆ?

hospet cmc
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಸ್ಥಳೀಯ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಯತ್ನ ನಡೆದಿದೆ. ಈ ಕುರಿತ ಸಾಧಕ-ಬಾಧಕಗಳ ಚರ್ಚೆಗಳು ಗರಿಗೆದರಿವೆ.

ಹೊಸಪೇಟೆ ರಾಜ್ಯದ 31ನೇ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನವಾಗಿದೆ. ದಿನೇ ದಿನೆ ಬೆಳವಣಿಗೆ ಹೊಂದುತ್ತಿರುವ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆದು ಜನರಿಗೆ ಅನುಕೂಲವಾಗಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.

35 ವಾರ್ಡ್, ಸುಮಾರು ಮೂರು ಲಕ್ಷ ಜನಸಂಖ್ಯೆ ಹೊಂದಿರುವ ನಗರದಲ್ಲಿ ವಸತಿ, ವಾಣಿಜ್ಯ ಕಟ್ಟಡಗಳಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ರೂಪದಲ್ಲಿ ನಗರಸಭೆಗೆ ವಾರ್ಷಿಕ 50 ರಿಂದ 60 ಕೋಟಿ ರೂ. ಅದಾಯ ಇದೆ. 2021ರಲ್ಲಿ ಆನಂದ್ ಸಿಂಗ್ ಸಚಿವರಾಗಿದ್ದಾಗ ಮಹಾನಗರ ಪಾಲಿಕೆ ಪ್ರಸ್ತಾವನೆ ಮುನ್ನೆಲೆಗೆ ಬಂದಿತ್ತು.

2011ರ ಸಮೀಕ್ಷೆಯಂತೆ ನಗರದಲ್ಲಿ 2.11 ಲಕ್ಷ ಜನಸಂಖ್ಯೆ ಇತ್ತು. 2025 ವರ್ಷಕ್ಕೆ ಅಂದಾಜು ಶೇ.13.46 ಜನಸಂಖ್ಯೆ ಏರಿಕೆಯಾಗಿದೆ ಎನ್ನಲಾಗಿದೆ. 2021ರಲ್ಲಿ ಪ್ರತಿ ಚ.ಕಿ.ಮೀ.ಗೆ 2049 ಜನಸಾಂದ್ರತೆ ಇತ್ತು. ಸದ್ಯ ಪ್ರತಿ ಚ.ಕಿ.ಮೀ.ಗೆ 4500 ಜನಸಾಂದ್ರತೆ ಇದೆ. 70.12 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ.

ಸಮೀಪದ ಇಂಗಳಗಿ ಗ್ರಾಮಸ್ಥರು ಒಪ್ಪಿದರೆ ನಗರಕ್ಕೆ ಸೇರಿಸಿಕೊಳ್ಳಲು ಚಿಂತನೆ ನಡೆದಿದೆ. ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಸದ, ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳ ಸಭೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಮೂಲಕ ವರದಿ ಸಲ್ಲಿಕೆಯಾಗಲಿದೆ. ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೆ ಸ್ಮಾರ್ಟ್‌ ಸಿಟಿ ಚಿಂತನೆಯೂ ಸಾಕಾರವಾಗಲಿದೆ. ಈ ಮೂಲಕ ನಗರ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಇದೆ.

ಮಾನದಂಡಗಳೇನು ?

ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಬೇಕಾದರೆ ಜನಸಂಖ್ಯೆಯು ಮೂರು ಲಕ್ಷಕ್ಕಿಂತ ಕಡಿಮೆ ಇರಬಾರದು. ಜನಸಾಂದ್ರತೆಯು ಪ್ರತಿ ಚದರ ಕಿ.ಮೀ.ಗೆ ಮೂರು ಸಾವಿರಕ್ಕಿಂತ ಕಡಿಮೆ ಇರಬಾರದು. ರಾಜಸ್ವ (ಸ್ಟಿಕೃತಿ) 6 ಕೋಟಿ ರೂ.ಗಿಂತ ಕಡಿಮೆ ಇರಬಾರದು. ಅಲ್ಲದೆ ಕೃಷಿಯೇತರ ಚಟುವಟಿಕೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಇಲ್ಲದ ಉದ್ಯೋಗ ಅವಕಾಶಗಳಿರಬೇಕಿದೆ.

ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸುವ ಪಕ್ರಿಯೆ ನಡೆಯುತ್ತಿದೆ. ನಗರಸಭೆ ಮತ್ತು ಸೇರ್ಪಡೆಗೊಳ್ಳುವ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಸಭೆ ನಡೆಸಿದ್ದೇವೆ. ಪ್ರಸ್ತಾವನೆ ಸಲ್ಲಿಸುವ ಮೊದಲು ನಕ್ಷೆ ಸಿದ್ಧಪಡಿಸುವ ಅಗತ್ಯವಿದೆ. ಎಲ್ಲ ಪ್ರಕ್ರಿಯ ಪೂರ್ಣಗೊಂಡ ಮೇಲೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. | ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

ಹೊಸಪೇಟೆ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆ ಗೇರಿದರೆ ಒಳ್ಳೆಯದು. ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಸುತ್ತಮುತ್ತಲಿನ ಪಂಚಾಯಿತಿ ಜನರ ಅಭಿಪ್ರಾಯವೂ ಅಗತ್ಯವಾಗಿದೆ. ಜನಾಭಿಪ್ರಾಯ ಪಡೆಯುವುದು ಮುಖ್ಯವಾಗಿದೆ.

| ರೂಪೇಶ್ ಕುಮಾರ್, ನಗರಸಭೆ ಅಧ್ಯಕ್ಷ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net