

ಹೊಸಪೇಟೆ: ಪ್ರೀತಿಸಿ ಮದುವೆಯಾಗಿದ್ದ ಅಪ್ರಾಪ್ತೆ ಪತ್ನಿಯನ್ನು ಆಕೆಯ ಪತಿಯೇ ಕೊಲೆ ಮಾಡಿ, ಸ್ನೇಹಿತರ ಸಹಾಯದಿಂದ ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿ ಹೂತಿಟ್ಟಿದ್ದು, ಈ ಸಂಬಂಧ ಪತಿ ಮತ್ತು ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಆತನ ತಾಯಿ ಲಕ್ಷ್ಮೀಯ ವಿಚಾರಣೆ ನಡೆದಿದೆ.
ನಗರದ ನೇಕಾರ ಕಾಲೋನಿಯ ಮಂಜುನಾಥ ಡಾಲಿ (24) ಕೊಲೆ ಆರೋಪಿ. ಈತನ ತಾಯಿ, ಸ್ನೇಹಿತರಾದ ತರುಣ್ ಹಾಗೂ ಅಕ್ಬರ್ ಪ್ರಕರಣದಲ್ಲಿ ಭಾಗಿಯಾದವರು. ಮೂರು ತಿಂಗಳ ಹಿಂದೆ ಮಂಜುನಾಥ ಅಂತರ್ಜಾತಿ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಮದುವೆಯಾದ ಕೆಲ ದಿನಗಳಲ್ಲಿ ಜಾತಿ ನಿಂದನೆ ಮತ್ತು ಕಿರುಕುಳ ನೀಡಲಾಗಿತ್ತು ಎಂದು ಮೃತರ ತಂದೆ ಆರೋಪಿಸಿದ್ದಾರೆ.
ತನ್ನ ತಾಯಿ ಮತ್ತು ಸ್ನೇಹಿತರೊಂದಿಗೆ ಸೇರಿ ಮನೆಯಲ್ಲೇ ಬಾಲಕಿಯನ್ನು ಮಂಜುನಾಥ ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಚೀಲದಲ್ಲಿ ಹಾಕಿ, ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ರುದ್ರಭೂಮಿಯಲ್ಲಿ ಹೂತಿಟ್ಟಿದ್ದಾರೆ ಎಂದು ಮೃತರ ತಂದೆ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಕೃತ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಶುಕ್ರವಾರ ಕೊಪ್ಪಳದ ಮುನಿರಾಬಾದ್ ರುದ್ರಭೂಮಿಯಲ್ಲಿ ಹೂತಿಟ್ಟಿದ್ದ ಮೃತದೇಹವನ್ನು ಹೊರತೆಗೆದು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಂಜುನಾಥ ಡಾಲಿ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ನ್ಯಾಯಾಲಯಕ್ಕೆ ಹಲವು ಬಾರಿ ಹಾಜರಾಗದ ಕಾರಣ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಆತ ನ್ಯಾಯಾಂಗ ಬಂಧನದಲ್ಲಿದ್ದ. ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಲ್ಕು ತಿಂಗಳ ಹಿಂದೆ ಮಂಜುನಾಥ ಡಾಲಿ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಕುಟುಂಬ ಕಲಹದಿಂದ ಬಾಲಕಿಯನ್ನು ಕೊಲೆ ಮಾಡಿ ಮುನಿರಾಬಾದ್ನಲ್ಲಿ ಹೂತಿಟ್ಟಿರುವ ಖಚಿತ ಮಾಹಿತಿ ಲಭಿಸಿದೆ. ಅದರಂತೆ ಮೃತದೇಹವನ್ನು ಹೊರತೆಗೆದು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಅರುಣಾಂಗ್ಶು ಗಿರಿ, ವಿಜಯನಗರ ಎಸ್ಪಿ