ಮೆಡಿಕಲ್ ಮಾಫಿಯಾಕ್ಕೆ ಸಹಕಾರಿ

30 MANJU 01
Published on

ಹೊಸಪೇಟೆ: ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹೊರಡಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ವಿಜಯನಗರ ಜಿಲ್ಲಾ ಘಟಕದಿಂದ ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆ ಎದುರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಪ್ರಧಾನ ಮಂತ್ರಿ ಜನೌಷಧಿ ಮಳಿಗೆ ಮುಚ್ಚೋದಕ್ಕೆ ಆದೇಶ ಹೊರಡಿಸಿದೆ. ಸರ್ಕಾರದ ದುರುದ್ದೇಶದಿಂದ ಜನೌಷಧಿ ಮಳಿಗೆ ಮುಚ್ಚುತ್ತಿದೆ. ಈ ಕೇಂದ್ರಗಳಲ್ಲಿ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯುತ್ತಿದ್ದವು. ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲ ಬಡವರೇ ಆಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಬಡ ಜನರಿಗೆ ಅನುಕೂಲ ಆಗುವ ಯೋಜನೆಗೂ ತಿಲಾಂಜಲಿ ಇಡುತ್ತಿದೆ. ಇದರ ಹಿಂದೆ ಮೆಡಿಕಲ್ ಮಾಫಿಯಾ ಹುನ್ನಾರ ಇದೆ. ಕೂಡಲೇ ಆದೇಶ ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಬಡವರಿಗೆ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತಿದ್ದವು, ಈಗ ಸರ್ಕಾರ ಈ ಕೇಂದ್ರಗಳನ್ನು ಮುಚ್ಚುವುದರಿಂದ ದುಬಾರಿ ಹಣ ನೀಡಿ ಔಷಧಿ ಖರೀದಿಸಬೇಕಾಗಿದೆ. ಮೆಡಿಕಲ್ ಮಾಫಿಯಾಕ್ಕೆ ಅವಕಾಶ ನೀಡದೇ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಂದುವರೆಸಬೇಕು. ಇದರಿಂದ ಆಸ್ಪತ್ರೆಗಳಿಗೆ ಬರುವ ಲಕ್ಷಾಂತರ ಜನರಿಗೆ ಅನುಕೂಲ ಆಗಲಿದೆ. ರಾಜ್ಯದಲ್ಲಿ ನಿತ್ಯ 5ರಿಂದ 6 ಲಕ್ಷ ಜನರಿಗೆ ಈ ಔಷಧಿಗಳಿಂದ ಅನುಕೂಲ ಆಗುತ್ತಿತ್ತು. ಗಂಭೀರ ಕಾಯಿಲೆಗಳಿಗೂ ಕೈಗೆಟಕುವ ದರದಲ್ಲಿ ಔಷಧಿ ದೊರೆಯುತ್ತಿತ್ತು. ಹಾಗಾಗಿ ಈ ಕೇಂದ್ರಗಳನ್ನು ಮರಳಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ, ಪ್ರಮುಖರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಸಾಲಿ ಸಿದ್ದಯ್ಯ ಸ್ವಾಮಿ, ಶಂಕರ ಮೇಟಿ, ಕೆ.ಎಸ್. ರಾಘವೇಂದ್ರ, ಕಿಚಿಡಿ ಕೊಟ್ರೇಶ್, ರೇವಣಸಿದ್ದಪ್ಪ, ವಿಜಯೇಂದ್ರ, ಚಂದ್ರು ದೇವಲಾಪುರ, ಹೊನ್ನೂರಪ್ಪ ಸತ್ಯನಾರಾಯಣ, ಗೌಳಿ ಬಸವರಾಜ್, ರಾಜಶೇಖರ, ಉಮಾದೇವಿ, ಅನುರಾಧ, ಪೂರ್ಣಿಮಾ, ಶ್ರೀಲತಾ ಇತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net