

| ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸಿನಿಂದ ಗೆದ್ದು ಬೀಗಿರುವ ಅನ್ನಪೂರ್ಣ ಅವರ ತವರು ಮನೆ ತಾಲೂಕಿನ ಕಮಲಾಪುರ ಮಾಳಗಿ ಕುಟುಂಬದ ಮಗಳು ಈಗ ಎಂಎಲ್‌ಎ ಆಗಿದ್ದರೆ, ಇವರ ಪತಿಯಾದ ಕಮಲಾಪುರದ ಅಳಿಯ ಈ.ತುಕಾರಾಮ್ ಅವರು ಹಾಲಿ ಸಂಸದ.
ಸಂಡೂರಿನಲ್ಲಿ ಅನ್ನಪೂರ್ಣ ಗೆಲುವು ಸಾಧಿಸುತ್ತಿದ್ದಂತೆ ಇತ್ತ ಕಮಲಾಪುರದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಮಲಾಪುರದಲ್ಲಿ ಹುಟ್ಟಿಬೆಳೆದಿರುವ ಅನ್ನಪೂರ್ಣಾ ಅವರು ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ಶಾಸಕಿಯಾಗಿ, ವಿಧಾನಸೌಧ ಮೆಟ್ಟಿಲೇರಿದ್ದಾರೆ. ತಾಲೂಕಿನ ಮರಿಯಮ್ಮನಹಳ್ಳಿ, ಕಲ್ಲಹಳ್ಳಿ ನಿವಾಸಿಗಳು ಈಗಾಗಲೇ ಶಾಸಕ ಸ್ಥಾನ ಅಲಂಕರಿಸಿದ್ದಾರೆ. ಆದರೆ, ಕಮಲಾಪುರದಿಂದ ಶಾಸಕ ಸ್ಥಾನ ಮಾತ್ರವಲ್ಲ, ರಾಜಕೀಯವಾಗಿಯೂ ಯಾರೂ ಉನ್ನತ ಸ್ಥಾನ ಏರಿರಲಿಲ್ಲ. ಈಗ ಕಮಲಾಪುರದ ಮನೆಮಗಳು ಅನ್ನಪೂರ್ಣ ಸಂಡೂರು ಶಾಸಕಿಯಾಗಿದ್ದು, ಕಮಲಾಪುರ ಜನರ ಆಶಯ ಪೂರ್ಣಗೊಳಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಮೊದಲ ಮಹಿಳಾ ಶಾಸಕಿ ಮತ್ತು ತವರು ಮನೆ ಕಮಲಾಪುರಕ್ಕೆ ಕೀರ್ತಿ ತಂದ ಪ್ರಥಮ ಮಹಿಳಾ ಶಾಸಕಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಳ್ಳಾರಿಯಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಮಲಾಪುರದಲ್ಲಿ ಎಲ್ಲ ಸಮುದಾಯದವರು ನಮ್ಮನೆ ಮಗಳು ಗೆದ್ದಳೆಂದು ಸಂಭ್ರಮಿಸಿ ಸಿಹಿ ಹಂಚಿ ಕುಣಿದಾಡಿದರು. ಮಧ್ಯರಾತ್ರಿವರೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹೊಸಪೇಟೆಯಂತೆ ಕಮಲಾಪುರದಲ್ಲಿ ಏಳು ವಾಲ್ಮೀಕಿ ಜನಾಂಗದ ಕೇರಿಗಳಿವೆ. ಮಾಳಗಿ ಮನೆತನಕ್ಕೆ ಪಟ್ಟಣದಲ್ಲಿ ದೊಡ್ಡ ಹೆಸರಿದೆ. ಅನ್ನಪೂರ್ಣ ತಂದೆ ರುದ್ರಪ್ಪ ಮಾಳಗಿ ಅವರು ಮೈಸೂರಿನಲ್ಲಿ ಪದವಿನ ವಿ ವ್ಯಾಸಂಗ ಮಾಡುವಾಗ ಈಗಿನ ಸಿಎಂ ಸಿದ್ದರಾಮಯ್ಯ ಅವರು ಸಹಪಾಠಿಗಳಾಗಿ, ಆಪ್ತ ಸ್ನೇಹಿತರೂ ಆಗಿಗಿದ್ದರು. ರುದ್ರಪ್ಪ ಅವರು ಕೃಷಿ ಕ್ಷೇತ್ರದಲ್ಲಿ ಮುಂದುವರಿದರು. ಸಿದ್ದರಾಮಯ್ಯ ಅವರು ಕಳೆದ ಎಂಪಿ ಚುನಾವಣೆಯಲ್ಲಿ ತುಕಾರಾಮ್ ಪರ ಕಮಲಾಪುರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭ 'ನನ್ನ ಗೆಳೆಯ ರುದ್ರಪ್ಪ ಅವರ ಅಳಿಯನನ್ನು ಎಂಪಿಯಾಗಿ ಕಳಿಸಬೇಕು' ಎಂದು ಮನವಿ ಮಾಡಿದ್ದರು. ಸಿಎಂ ಈ ಭಾಗದಲ್ಲಿ ಬಂದರೆ ರುದ್ರಪ್ಪ ಅವರನ್ನು ನೆನೆಯದೆ ಇರಲ್ಲ.
ಮದುವೆಯಾದ ಬಳಿಕವೂ ತವರನ್ನು ಮರೆಯದ ಅನ್ನಪೂರ್ಣ ಈಗ ಊರಿಗೆ ಕೀರ್ತಿ ತಂದಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭ ಪತಿಯ ಗೆಲವಿಗಾಗಿ ಬಳ್ಳಾರಿ ವಿಜಯನಗರ ಜಿಲ್ಲೆ ತುಂಬ ಓಡಾಡಿದ್ದರು. ತವರೂರು ಕಮಲಾಪುರದಲ್ಲೂ ಪ್ರಚಾರ ನಡೆಸಿದ್ದರು. ದಾಂಪತ್ಯ ಜೀವನದ ಜತೆಗೆ ರಾಜಕೀಯದಲ್ಲೂ ಪತಿಯ ಗೆಲುವಿಗಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ ಎಂಬ ಅಭಿಮಾನದ ಮಾತುಗಳು ಹುಟ್ಟೂರಲ್ಲಿ ಹರಿದಾಡುತ್ತಿದೆ.
ಕಮಲಾಪುರದ 19ನೇ ವಾರ್ಡ್ ಚಾವಡಿಕೇರಿಯ ಪಪಂ ಮಾಜಿ ಸದಸ್ಯ ರುದ್ರಪ್ಪ ಮಳಗಿ ಮತ್ತು ಕಮಲಮ್ಮ ದಂಪತಿ ಪುತ್ರಿಯೇ ಈ ಅನ್ನಪೂರ್ಣ. ಹೊಸಪೇಟೆಯ ವಿಜಯನಗರ ಕಾಲೇಜ್‌ನಲ್ಲಿ ಪಿಯು ವ್ಯಾಸಂಗ ಮಾಡಿದ್ದ ಅನ್ನಪೂರ್ಣ, ಚಿತ್ರದುರ್ಗದಲ್ಲಿ ಬಿಎ ಪದವಿ ಗಳಿಸಿದ್ದಾರೆ. ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದ ಈ.ತುಕಾರಾಮ್ ಅವರನ್ನು 1995ರಲ್ಲಿ ವಿವಾಹವಾಗಿದ್ದರು. ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮುನ್ನ ಕಮಲಾಪುರದಲ್ಲಿ ಹಿರಿಯರ ಸಮಾಧಿ ದರ್ಶನ ಪಡೆದು, ಪಟ್ಟಣದಲ್ಲಿ ಹಿರಿಯರ ಅಭಿಪ್ರಾಯ ಅಲಿಸಿದ್ದರು. ಪತಿ ಶಾಸಕರಾಗಿದ್ದರೂ ವಿನಯ ಮೈಗೂಡಿಸಿಕೊಂಡಿದ್ದಾರೆ.
ನನ್ನ ತವರೂರಿನ ಋಣ ಎಂದು ಮರೆಯಲು ಆಗಲ್ಲ. ನನ್ನ ಮಾಳಗಿ ಮನೆತನದಲ್ಲಿ ನನಗೆ ಸಂಸ್ಕಾರ ಹೇಳಿಕೊಡಲಾಗಿದೆ. ಕಮಲಾಪುರದ ಸಾರ್ವಜನಿಕರ ಬೆಂಬಲ, ಅವರ ಪ್ರೀತಿಗೆ ಋಣಿಯಾಗಿರುವೆ. ಸಿಎಂ ಸ್ನೇಹಿತನ ಮಗಳು ನಾನು. ಅವರ ಗೌರವ ಹೆಚ್ಚಿಸುವ ಕೆಲಸ ಮಾಡುವೆ. | ಅನ್ನಪೂರ್ಣ ಸಂಡೂರಿನ ನೂತನ ಶಾಸಕಿ ನನ್ನ ಸಹೋದರಿ ಶಾಸಕಿ ಆಗಿದ್ದು ತುಂಬಾ ಸಂತಸ ತಂದಿದೆ. ಕಮಲಾಪುರದ ಅಳಿಯ ಶಾಸಕರಾಗಿ, ಈಗ ಎಂಪಿ ಆಗಿದ್ದರೆ, ಅಕ್ಕ ಶಾಸಕಿ ಆಗಿದ್ದಾರೆ. ಅಪ್ಪನ ರಾಜಕೀಯ ಕನಸು ಈಡೇರಿಸಿದ್ದಾರೆ. | ಮಾರುತಿ ಮಾಳಗಿ ಅನ್ನಪೂರ್ಣ ಸಹೋದರ, ಕಮಲಾಪುರ