

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಜಯನಗರ ಅರಸರ ಕಾಲದ ಐತಿಹಾಸಿಕ ಕಮಲಾಪುರ ಕೆರೆ ಇಂದು ಕಸ ವಿಲೇವಾರಿ, ಕೊಳಚೆ ನೀರು ಮತ್ತು ಒತ್ತುವರಿಯಿಂದಾಗಿ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ. ಜೀವವೈವಿಧ್ಯದ ತಾಣವಾಗಿದ್ದ ಈ ಕೆರೆಗೆ ಆಪತ್ತು ಎದುರಾಗಿದೆ.
ಒಂದು ಕಾಲದಲ್ಲಿ ವಿಜಯನಗರ ರಾಜಧಾನಿ ಹಂಪಿಯ ಜನರಿಗೆ ಶುದ್ಧ ಕುಡಿವ ನೀರು ಹಾಗೂ ಕೃಷಿಗಾಗಿ ನಿರ್ಮಿಸಲಾಗಿದ್ದ ಈ ಕೆರೆ ಅಪರೂಪದ ಸ್ಥಳೀಯ ಮತ್ತು ವಲಸೆ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿತ್ತು. ಆದರೆ, ಈಗ ಸಿಹಿನೀರಿನ ಜೌಗು ಪ್ರದೇಶದ ಮೂಲ ಸ್ವರೂಪವೇ ಬದಲಾಗಿದೆ. ಒಂದು ಕಡೆ ಒತ್ತುವರಿ ಕೆರೆಯನ್ನು ನುಂಗುತ್ತಿದ್ದರೆ, ಮತ್ತೊಂದು ಕಡೆ ಜನರು ನಿತ್ಯ ಕಸ ಸುರಿದು ತಿಪ್ಪೆಯನ್ನಾಗಿ ಮಾಡುತ್ತಿದ್ದಾರೆ. ಜತೆಗೆ, ನಗರದ ಬಸವಣ್ಣ ಕಾಲುವೆ ಕೊಳಚೆ ನೀರೂ ನೇರ ಸೇರುತ್ತಿರುವುದರಿಂದ ಕೆರೆ ನೀರು ಮಾತ್ರವಲ್ಲದೆ ಸುತ್ತಲಿನ ವಾತಾವರಣವೂ ಕಲುಷಿತಗೊಂಡಿದೆ.
ಹಂಪಿ ಸಮೀಪದಲ್ಲಿರುವ ಈ ಕೆರೆಗಳನ್ನು ರಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ಕ್ಷೇತ್ರದ ಜನಪ್ರತಿನಿಧಿಗಳು, ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ಒಗ್ಗೂಡಿ ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ಅನುದಾನದಡಿ ಕೆಲಸ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ. ಇದರಿಂದ ನೀರಿನ ಮೂಲ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಿದಂತಾಗುತ್ತದೆ. ಕೆರೆಯನ್ನು ಅಭಿವೃದ್ಧಿಪಡಿಸಿದರೆ ಪಕ್ಷಿ ಪ್ರಿಯರು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ, ಇದರಿಂದ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂಬುದು ಪ್ರಜ್ಞಾವಂತ ಮಾತು. ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತ ಒತ್ತುವರಿಯಾದ ಜಾಗವನ್ನು ಸರ್ವೆ ನಡೆಸಿ, ಅದನ್ನು ತೆರವುಗೊಳಿಸಬೇಕು. ಕಮಲಾಪುರ ಪಟ್ಟಣಕ್ಕೆ ಸುಸಜ್ಜಿತ ಉದ್ಯಾನ, ವಿಶ್ರಾಂತಿ ಸ್ಥಳ ಅಥವಾ ವಾಯುವಿಹಾರಕ್ಕೆ ಹಚ್ಚಹಸಿರಿನ ಸ್ಥಳವಾಗಬೇಕಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸಿ ಉದ್ಯಾನ ಮಾದರಿಯಲ್ಲಿ ಕೆರೆ ಅಭಿವೃದ್ಧಿಪಡಿಸಬೇಕಿದೆ.ಸುಮಾರು 787.6 ಹೆಕ್ಟೇರ್ ವಿಸ್ತೀರ್ಣದ ಕಮಲಾಪುರ ಕೆರೆ ಮತ್ತು 476 ಹೆಕ್ಟೇರ್ ವಿಸ್ತೀರ್ಣದ ಚಿಕ್ಕ ಅಮಾನಿಕೆರೆ, ಬಾರ್-ಹೆಡೆಡ್ ಹೆಬ್ಬಾತು, ಬಣ್ಣದ ಕೊಕ್ಕರೆ, ಪೆಲಿಕನ್, ವಿವಿಧ ಜಾತಿಯ ಬಾತುಕೋಳಿ, ಬೆಳ್ಳಕ್ಕಿ, ಹೆರಾನ್‌ನಂತಹ ಪಕ್ಷಿ ಪ್ರಭೇದಗಳು ಹಾಗೂ ಹಲವು ಜಾತಿಯ ಕಪ್ಪೆ ಮತ್ತು ಚಿಟ್ಟೆಗಳ ಆವಾಸ ಸ್ಥಾನವಾಗಿತ್ತು. ಅಲ್ಲದೆ, ಅಪರೂಪದ ಗಿಡಮೂಲಿಕೆಗಳ ಕೇಂದ್ರವೂ ಆಗಿತ್ತು. ಇಂತಹ ಜೀವವೈವಿಧ್ಯ ತಾಣಕ್ಕೆ ಈಗ ತೀವ್ರ ಕುತ್ತು ಎದುರಾಗಿದೆ. ಒಂದು ಕಾಲದಲ್ಲಿ ಪಕ್ಷಿಗಳು ಸಾವಿರಾರು ಮೈಲು ದೂರದಿಂದ ಬಂದು ಸಂತಾನೋತ್ಪತ್ತಿಯಲ್ಲಿ ತೊಡಗಲು ಕಮಲಾಪುರ ಕೆರೆಯ ಸಿಹಿ ನೀರಿನ ತಂಪಾದ ವಾತಾವರಣ ಕಾರಣವಾಗಿತ್ತು. ಆದರೆ, ಮನುಷ್ಯನ ಸ್ವಾರ್ಥದಿಂದಾಗಿ ಕೆರೆಯ ಮೂಲ ಸ್ವರೂಪವೇ ಬದಲಾಗಿದೆ. ಈಗ ಹಕ್ಕಿಗಳ ಕಲರವ ಕಡಿಮೆಯಾಗಿದೆ. ಬೆರಳೆಣಿಕೆಯಷ್ಟು ಮಾತ್ರ ಪಕ್ಷಿ ಮತ್ತು ಪ್ರಾಣಿಗಳನ್ನು ನೋಡುವಂತಾಗಿದೆ ಎಂದು ಹವ್ಯಾಸಿ ಛಾಯಾಚಿತ್ರಗಾರರೊಬ್ಬರು ಹೇಳಿದ್ದಾರೆ.
ಹೊಸಪೇಟೆಯಲ್ಲಿ ಬಸವಣ್ಣ ಕಾಲುವೆಗೆ ಚರಂಡಿ ನೀರು ಹೋಗದಂತೆ ಯೋಜನೆ ರೂಪಿಸಲಾಗಿದೆ. ಕಮಲಾಪುರ ಹಾಗೂ ಇತರ ಗ್ರಾಮಗಳ ಕಲುಷಿತ ನೀರು ಸೇರದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ