ವಿಜಯನಗರ ವೈಭವಕ್ಕೆ ಇನ್ನೆರಡೇ ದಿನ

25 MANJU 02
Published on
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಫೆ.28ರಂದು ಚಾಲನೆ ಸಿಗಲಿದೆ. ಮೂರು ದಿನ ನಡೆಯುವ ಉತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಉತ್ಸವದಲ್ಲಿ ಆರು ವೇದಿಕೆಗಳು ಇರಲಿದ್ದು, ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. ಉತ್ಸವದ ಸಿದ್ಧತಾ ಕಾಮಗಾರಿಗಳು ಭರದಿಂದ ಸಾಗಿದ್ದು, ಸಮಿತಿಗಳ ಸದಸ್ಯರು ಉಸ್ತುವಾರಿ ಮಾಡುತ್ತಿದ್ದಾರೆ. ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.
ಫೆ.28ರಂದು ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲ-ಪುಷ್ಪ ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯಗಳ ಮೇಳ, ಆಹಾರ ಮೇಳ, ವಿಜ್ಞಾನಿಗಳಿಂದ ಉಪನ್ಯಾಸ ಹಾಗೂ ಸಂವಾದ, ಪುಸ್ತಕ ಪ್ರದರ್ಶನ, ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ಚಿತ್ರ ಸಂತೆ, ಮತ್ತ್ವ ಮೇಳಕ್ಕೆ ಚಾಲನೆ ನೀಡಲಾಗುವುದು. ಸಂಜೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಉದ್ಘಾಟನೆ ಆಗಲಿದೆ.
ಮಾ.01ರಂದು ಯೋಗಾಸನ, ಕುಸ್ತಿ ಸೇರಿದಂತೆ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ನೀಡಲಾಗುತ್ತದೆ. ಕುರಿಗಳ ಪ್ರದರ್ಶನ ನಡೆಯಲಿದೆ. ಮಾ.2ರಂದು ಶ್ವಾನಗಳ ಪ್ರದರ್ಶನ, ಜಾನಪದ ವಾಹಿನಿ ಮೆರವಣಿಗೆ ನಡೆಯಲಿದೆ.

ಮುಖ್ಯ ವೇದಿಕೆಗೆ ಎಂಪಿಪಿ ಹೆಸರು

ಗಾಯತ್ರಿ ಪೀಠದ ಬಳಿ ನಿರ್ಮಿಸಿರುವ ಮುಖ್ಯ ವೇದಿಕೆಗೆ ಮಾಜಿ ಉಪಮಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹೆಸರು ಇಡಲಾಗಿದೆ. ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇಗುಲ, ಸಾಸಿವೆಕಾಳು ಗಣಪ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಂಪಿಯ ಆನೆ ಮತ್ತು ಕುದರೆ ಲಾಯ ಆವರಣದಲ್ಲಿ ವಿಜಯನಗರ ವೈಭವ ಸಾರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಾನವಮಿ ದಿಬ್ಬದ ಬಳಿ 6ನೇ ವೇದಿಕೆ ನಿರ್ಮಾಣ ಮಾಡಲಾಗಿದೆ.

ಕಲಾವಿದರಿಂದ ಮನರಂಜನೆ

ಗಾಯತ್ರಿ ಪೀಠದ ಬಳಿಯ ಪ್ರಧಾನ ವೇದಿಕೆಯಲ್ಲಿ ಫೆ.28, ಮಾ.1 ಹಾಗೂ 2ರಂದು ಸಂಜೆ 6 ಗಂಟೆಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಂದನವನದ ಕಲಾವಿದರ ದಂಡೇ ಹರಿದು ಬರಲಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ದೇಶಕ ತರುಣ್ ಸುಧೀರ್, ನಟಿಯರಾದ ಪ್ರೇಮಾ, ವೈಷ್ಣವಿಗೌಡ, ಬೇಬಿ ಸಿಹಿ, ಸೋನಲ್ ಮೊಂಥೆರೋ ಭಾಗವಹಿಸುವರು. ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಬಿಗ್ ಬಾಸ್ ವಿಜೇತ ಹನುಮಂತ ಕೂಡ ಭಾಗವಹಿಸಲಿದ್ದಾರೆ. ಮಾ.1ರಂದು ನಟ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಸಿಷ್ಠಸಿಂಹ, ರ್ಯಾಪರ್ ರಚ್ಚು, ಶರಣ್ಯ ಶೆಟ್ಟಿ, ಮೋಕ್ಷ ಕುನಾಲ್, ಅನುಶ್ರೀ, ದಿವ್ಯಾ ಅಲೂರ್, ರಜನಿ ಬೀಟ್ ಗುರು ಭಾಗವಹಿಸುವರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಮಾ ನೇತೃತ್ವದ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಬಾಳು ಬೆಳಗುಂದಿ ಭಾಗವಹಿಸುವರು. ಕಾಮಿಡಿ ಕಿಲಾಡಿತಂಡ ಹ್ಯಾ ಸಂಜೆ ಕಾರ್ಯಕ್ರಮ ನಡೆಯಲಿದೆ. ಮಾ.2ರಂದು ನಟ ವಿಜಯ್ ರಾಘವೇಂದ್ರ, ರಮ್ಯಾ, ಅನು ಪ್ರಭಾಕರ್, ದಿಗಂತ್, ಐಂದ್ರಿತಾ ರೇ, ರಾಗಿಣಿ ದ್ವಿವೇದಿ, ಶ್ರುತಿ ಹರಿಹರನ್, ಭಾವನಾ ರಾವ್ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ತಂಡದಿಂದ ರಸಮಂಜರಿ ಕಾರ್ಯಕ್ರಮ. ಮಾಳೂ ನಪನಾಳ ಗೀತಗಾಯನ ನಡೆಸಿಕೊಡುವರು. ಗಿಚ್ಚಿ ಗಿಲಿಗಲಿ ತಂಡದಿಂದ ಹ್ಯಾಸ ಸಂಜೆ ಕಾರ್ಯಕ್ರಮ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net