

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಶ್ರಾವಣ ಮಾಸದ ಸಂದರ್ಭದಲ್ಲಿ ಇಳಿಕೆ ಆಗಿದ್ದ ತೆಂಗಿನಕಾಯಿ ದರ ಕೆಲ ದಿನಗಳಿಂದ ಮತ್ತೆ ಏರಿಕೆಯಾಗಿದೆ. ಇದರಿಂದ ತೆಂಗು ಬೆಳೆಯುವ ರೈತರು ಖುಷಿಯಲ್ಲಿದ್ದರೆ, ಗ್ರಾಹಕರು ದರ ದುಬಾರಿ ಆಯಿತು ಎಂದು ಗೊಣಗುತ್ತಲೇ ಖರೀದಿ ಮಾಡುತ್ತಿದ್ದಾರೆ. ದೀಪಾವಳಿಗೆ ಇನಷ್ಟು ಬೆಲೆ ಏರುವ ಸಾದ್ಯತೆಯಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ತೆಂಗಿನಕಾಯಿ ದರ ಬಹುತೇಕ ದುಪ್ಪಟ್ಟು ಆಗಿದೆ. ಆಗ ಕೆಜಿಗೆ ಗರಿಷ್ಠ 35-40 ರೂ.ದರವಿದ್ದರೆ, ಈಗ 65. ರಿಂದ 70 ರೂ. ದರ ಬೆಳೆಗಾರರಿಗೆ ಲಭ್ಯವಾಗುತ್ತಿದೆ. ಈಗ ಏರಿಕೆ ಆಗುತ್ತಿರುವ ದರ ಎರಡು ತಿಂಗಳ ಹಿಂದೆ ಲಭ್ಯವಾಗುತ್ತಿತ್ತು. ಆಗ ಶ್ರಾವಣ ಮಾಸ ಪ್ರಾರಂಭಕ್ಕೆ ಮುಂಚಿತ ಮೂರು ನಾಲ್ಕು ತಿಂಗಳ ಕಾಲ ಹೀಗೆ ದರ ಏರುತ್ತ ಪ್ರತಿ ಕೆಜಿಗೆ ಗರಿಷ್ಠ 70 ರೂ.ವರೆಗೆ ತಲುಪಿತ್ತು. ಆದರೆ ಶ್ರಾವಣಮಾಸ, ಗಣೇಶ ಚತುರ್ಥಿ ಹಬ್ಬದ ವೇಳೆಗೆ ಕುಸಿತ ಕಂಡಿದ ಕಾಯಿ, 62ರಿಂದ 64 ರೂ.ಗೆ ಬಂದು ನಿಂತಿತು. ಆಗ ನಿರಾಸೆ ಅನುಭವಿಸಿದ್ದ ಬೆಳೆಗಾರರು ಈಗ ಮತ್ತೆ ದರ ಏರಿಕೆಯ ಮಾರ್ಗದಲ್ಲಿ ಸಾಗುತ್ತಿರುವುದಕ್ಕೆ ಖುಷಿ ವ್ಯಕ್ತ ಪಡಿಸುತ್ತಿದ್ದಾರೆ.
ಜಿಲ್ಲೆಯ 1437 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಬೆಳೆಯುವ ತೆಂಗು ಇಲ್ಲೆ ಕಡಿಮೆ ಬರುತ್ತದೆ. ಆದ್ದರಿಂದ ಜಿಲ್ಲೆಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಜಿಲ್ಲೆಗೆ ಆಮದು ಆಗುತ್ತದೆ. ಆ ಭಾಗದಲ್ಲಿ ಇಳುವರಿ ಕಡಿಮೆಯಾಗಿದ್ದರಿಂದ ಬೆಲೆ ಹೆಚ್ಚಳ ಹಿನ್ನೆಲೆ ಎಳನೀರನ್ನು ಕೀಳಿಸಿ ಮುಂಬಯಿ, ಹೊಸದಿಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿರುವ ಪರಿಣಾಮ ತೆಂಗಿನ ಕಾಯಿಗೆ ಡಿಮ್ಯಾಂಡ್ ಹೆಚ್ಚಿದೆ. ಬೇಡಿಕೆಗೆ ಅನುಗುಣವಾಗಿ ತೆಂಗು ಹಾಗೂ ಕೊಬ್ಬರಿ ಸಿಗದೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ತೆಂಗಿನ ಕಾಯಿ ನಿತ್ಯದ ಅಡುಗೆ, ಪೂಜಾ ಕೈಂಕರ್ಯ ಸೇರಿದಂತೆ ಇತರೆ ಕಾರ್ಯಗಳಗೆ ಅತಿ ಅವಶ್ಯಕತೆ. ಅಗತ್ಯ ವಸ್ತುಗಳಲ್ಲಿ ಒಂದಾಗಿರುವ ತೆಂಗಿನ ಕಾಯಿಗೆ ಭಾರಿ ಬೆಲೆ ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ತೆಂಗಿನಕಾಯಿ 70ರಿಂದ 75 ರೂ.ಗೆ ಮಾರಾಟವಾಗುತ್ತಿದೆ. ಪ್ರಸ್ತುತ ಇಳುವರಿ ಕಡಿಮೆಯಾಗಿ ಬೇಡಿಕೆ ಹೆಚ್ಚಿರುವ ಪರಿಣಾಮ ಬೆಲೆ ಏರಿಕೆಯಾಗುತ್ತಲೇ ಇದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಹೊಸ ತೆಂಗು ಬಂದ ಬಳಿಕವಷ್ಟೇ ಬೆಲೆ ಇಳಿಮುಖವಾಗಬಹುದು ಎನ್ನುತ್ತಾರೆ ವರ್ತರು.
ಮಾರುಕಟ್ಟೆಯಲ್ಲಿ ತೆಂಗಿನಕಾಯಿ, ದರ ಒಮ್ಮೆಕುಸಿತ, ಇನ್ನೊಮ್ಮೆ ಹೆಚ್ಚಳ ಆಗುತ್ತಿರುವುದಕ್ಕೆ ನಿರ್ದಿಷ್ಟ ಕಾರಣಗಳು ಇಲ್ಲ. ಹಬ್ಬಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಅವಕ ಆಗಿರುವುದು ದರ ಇಳಿಕೆ ಆಗಿದ್ದಕ್ಕೆ ಕಾರಣ ಇರಬಹುದು ಎಂಬುದಾಗಿ ವ್ಯಾಪಾರಸ್ಥರು ಹೇಳುತ್ತಾರೆ.
ತೆಂಗಿನ ಕಾಯಿ ದರ ಏರಿಕೆ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಚಟ್ನಿ, ಸಾಂಬಾರ್, ಗೊಜ್ಜು, ಪಲಾವ್, ಪಲ್ಯ ಸಹಿತ ನಾನಾ ತಿಂಡಿ-ತಿನಿಸು, ಮಸಾಲ ಪದಾರ್ಥ ತ ಯಾರಿಸಲು ತೆಂಗಿನಕಾಯಿ ಹೆಚ್ಚು ಬೇಕಿದೆ. ಗ್ರಾಹಕರಿಗೆ ರುಚಿಯಾದ ತಿಂಡಿ-ಊಟ ಪೂರೈಸ ಬೇಕೆಂದರೆ ದುಬಾರಿಯಾದರೂ ತೆಂಗಿನಕಾಯಿ ಬಳಸುವುದು ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು. ಇನ್ನೂ ಕೆಲ ಹೊಟೇಲ್‌ಗಳಲ್ಲಿ ಕೊಬ್ಬರಿ ಚಟ್ನಿ ಮಾಡದೇ, ಇತರೆ ಚಟ್ನಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಬೇಡಿಕೆಯಷ್ಟು ತೆಂಗಿನ ಉತ್ಪಾದನೆ ಇಲ್ಲ. ಇಲ್ಲಿ ಏಳನೀರಿಗೆ ಬಳಕೆಯಾಗುತ್ತಿದೆ. ಆದ್ದರಿಂದ ತೆಂಗಿನ ಕಾಯಿ ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿ ಮತ್ತಿತರ ಭಾಗದಿಂದ ತೆಂಗು, ಕೊಬ್ಬರಿ ಮುಂದಿನ ದಿನಗಳಲ್ಲಿ ಬಂದ ಬಳಿಕ ಬೆಲೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. - ಚಿದಾನಂದ ಪೂಜಾರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ವಿಜಯನಗರ