

ಹೊಸಪೇಟೆ : ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
19ನೇ ಗೇಟ್ ಕಳಚಿದ ಹಿನ್ನೆಲೆಯಲ್ಲಿ ತಡವಾಗಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮ, ಎರಡನೇ ಭಾರಿ ಸಂಪೂರ್ಣ ಭರ್ತಿಗಿದ ಬೆನ್ನಲ್ಲೇ ಜಲಾಶಯ ಆಗಮಿಸಿ ಸಿಎಂ ತುಂಗಭದ್ರೆಗೆ ಕಳಶದ ನೀರು ಸಮರ್ಪಣೆ ಮಾಡಿದರು. ಬಳಿಕ ಬಾಗಿನ ಅರ್ಪಣೆ ಮಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಈ ಬಾರಿ ಮುಂಗಾರು ಆರಂಭದಲ್ಲೇ ಉತ್ತಮವಾಗಿದ್ದರಿಂದ ಜುಲೈ ಕೊನೆಯ ವಾರದಲ್ಲೇ ಜಲಾಶಯ ತುಂಬಿಹೋಗಿತ್ತು. ಆಗಸ್ಟ್ 6ರಂದು ತುಂಗಭದ್ರಾಕ್ಕೆ ಬಾಗಿನ ಅರ್ಪಿಸಲು ಮೊದಲಿಗೆ ದಿನಾಂಕ ನಿಗದಿಯಾಗಿತ್ತು. ಆದರೆ ಆ ಸಮಯದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ಅಲ್ಲಲ್ಲಿ ಸಮಾವೇಶಗಳನ್ನು ನಡೆಸಿದ್ದರಿಂದ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರು ಗೈರಾಗುವುದು ಅನಿವಾರ್ಯವಾಗಿತ್ತು. ಹೀಗಾಗಿ ಸಿಎಂ ಅವರೂ ತಮ್ಮ ಕಾರ್ಯಕ್ರಮ ಮುಂದೂಡಿದ್ದರು. ಬಳಿಕ ಆಗಸ್ಟ್ 13ಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಮತ್ತೆ ಆಗಸ್ಟ್ 10 ರಂದು ರಾತ್ರಿ 19ನೇ ಗೇಟ್ ಕಳಚಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಯಿತು.
ಕೊಚ್ಚಿ ಹೋದ ಬಳಿಕ ತೀವ್ರ ಆತಂಕ ದಲ್ಲಿದ್ದ ರೈತರಿಗೆ ಸಿಎಂ ಭರವಸೆ ನೀಡಿದರು. ಮತ್ತೆ ಜಲಾಶಯ ತುಂಬುತ್ತದೆ ನಾನೇ ಬಂದು ಬಾಗಿನ ಅರ್ಪಿಸುತ್ತೆನೆ ಎಂದು ಭವಿಷ್ಯ ನುಡಿದಿದ್ದರು. ನಂತರ ಜಲಾಶಯ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ವಾರದೊಳಗೆ ತಾತ್ಕಾಲಿಕ ಗೇಟ್ ಅಳವಡಿಸಲಾಗಿತ್ತು. ಅಮನದಾಜು 30 ಟಿಎಂಸಿ ಅಡಿಯಷ್ಟು ನೀರು ಪೋಲಾಯಿತು. ಮತ್ತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದ ಜಲಾಶಯ ಈ ವರ್ಷ ಎರಡನೇ ಬಾರಿ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಇದೀಗ ಬಾಗಿನ ಅರ್ಪಿಸಿದ್ದಾರೆ.
ಜಲ ಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿರಾಜ್ ತಂಗಡಗಿ, ಸಚಿವರಾದ ಬೋಸ್ ರಾಜ್, ಶರಣಪ್ರಕಾಶ್ ಪಾಟೀಲ್, ಸಂಸದರಾದ ಈ.ತುಕಾರಾಮ್ ರಾಜಶೇಖರ್ ಹಿಟ್ನಾಳ್, ಹಾಗೂ ಗೇಟ್ ದುರಸ್ತಿ ಕಾರ್ಯ ನಡೆಸಿದ
ಕನ್ಹಯ್ಯ ನಾಯ್ಡು ಸೇರಿದಂತೆ ಇತರರಿದ್ದರು. ಶಾಸಕ ಎಚ್.ಆರ್.ಗವಿಯಪ್ಪ ಗೈರಿದ್ದರು.