ಬುಕ್ಕಸಾಗರ ಸೇತುವೆ ಮೇಲೆ ಹೆಚ್ಚಿದ ಪ್ರಿವೆಡ್ಡಿಂಗ್ ಶೂಟ್

28 MANJU 01
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಬುಕ್ಕಸಾಗರ-ಕಡೇಬಾಗಿಲು ಬಳಿ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿ ಸೇತುವೆ ಮೇಲೆ ಪ್ರಿ ವೆಡ್ಡಿಂಗ್ ಶೂಟಿಂಗ್‌ಗಳು ಹೆಚ್ಚುತ್ತಿದ್ದು, ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಮದುವೆ ಸೀಸನ್‌ ನಲ್ಲಿ ಬುಕ್ಕಸಾಗರ ಸೇತುವೆ ನವ ಜೋಡಿಗಳ ಪ್ರಿ ವೆಡ್ಡಿಂಗ್ ಶೂಟಿಂಗ್‌ಗೆ ಹಾಟ್ ಫೇವರೀಟ್ ಸ್ಥಳ ಆಗಿದೆ. ಜೋಡಿಗಳು ಬಂದು ಪ್ರಿ ವೆಡ್ಡಿಂಗ್ ಶೂಟಿಂಗ್ ನಲ್ಲಿ ತಲ್ಲೀನರಾದರೆ, ಕಿರಿದಾದ ಸೇತುವೆ ಮೇಲೆ ಒಂದೆಡೆ. ವಾಹನಗಳು ಸಂಚರಿಸುವಂತಾಗಿದೆ. ಇದರಿಂದಾಗಿ ವಾಹನಗಳು ವೇಗವಾಗಿ ಚಲಿಸದಂತಾಗಿದೆ.

ಬುಕ್ಕಸಾಗರ ಸೇತುವೆ ಈ ಮೊದಲೇ ಸಾರ್ವಜನಿಕರ ಸೆಲ್ಸಿ ಸ್ಥಳವಾಗಿ ಖ್ಯಾತಿ ಪಡೆದಿದೆ. ಸೇತುವೆ ಮೇಲೆ ನಿಂತು, ಕುಣಿದು ಕುಪ್ಪಳಿಸಿ ಜನರು ಫೋಟೋ ತೆಗೆಸಿಕೊಳ್ಳುತ್ತಾರೆ. ಇದೀಗ ಪ್ರಿ ವೆಡ್ಡಿಂಗ್ ಶೂಟಿಂಗ್‌ಗಳು ಕೂಡ ನಡೆಯುತ್ತಿವೆ. ನವ ಜೋಡಿಗಳು ಸೇತುವೆ ಮೇಲೆ ಸಾಹಸ ಮಾಡುತ್ತಾ ಕ್ಯಾಮರಾಕ್ಕೆ ಫೋಸ್ ನೀಡುತ್ತಿದ್ದಾರೆ. ಈ ಸಾಹಸ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ಅನಾಹುತಕ್ಕೆ ದಾರಿ ಮಾಡಿಕೊಡದಿರಲಿ ಎಂಬುದು ಸಾರ್ವಜನಿಕರ ಕಳಕಳಿಯಾಗಿದೆ. ಹಂಪಿಯ ನಾನಾ ಸ್ಥಳಗಳಲ್ಲಿ ಈಗಾಗಲೇ ಪ್ರೀ ವೆಡ್ಡಿಂಗ್ ಶೂಟಿಂಗ್ ತಂಡಗಳು ಕಾಣಸಿಗುತ್ತವೆ. ಹಂಪಿಯಲ್ಲಿ ಫೋಟೋ, ವೀಡಿಯೋ ಶೂಟಿಂಗ್‌ಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಹಾಗೂ ದುಬಾರಿ ಶುಲ್ಕವನ್ನೂ ಪಾವತಿಸಬೇಕು. ಆದ್ದರಿಂದ ನವಜೋಡಿಗಳು ಹಂಪಿ ಹೊರ ಭಾಗದಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಈ ಪೈಕಿ ಬುಕ್ಕಸಾಗರ ಸೇತುವೆ ಪ್ರಮುಖವಾಗಿದೆ.

ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಲು ಮೂರ್ನಾಲ್ಕು ಕ್ಯಾಮರಾಗಳು, ಲೈಟಿಂಗ್, ಮೇಕಪ್ ಮ್ಯಾನ್, ಬಟ್ಟೆ ಬದಲಾಯಿಸಲು ಪ್ರತ್ಯೇಕ ವ್ಯವಸ್ಥೆ ಡೋನ್ ಕ್ಯಾಮರಾದೊಂದಿಗೆ ಆಗಮಿಸುತ್ತಿದ್ದಾರೆ. ಈ ಸೇತುವೆ ಹಂಪಿಯೊಂದಿಗೆ ಕಲಬುರಗಿ, ರಾಯಚೂರು, ಹೈದರಾಬಾದ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಸದಾ ವಾಹನಗಳ ಸಂಚಾರ ಹೆಚ್ಚಿರುತ್ತದೆ. ತುಂಗಭದ್ರಾ ಜಲಾಶಯದ ಮುಂದಿನ ಸೇತುವೆ, ನಗರ ಹೊಲವಲಯದ ಟನೆಲ್, ಡ್ಯಾಂ ಹಿನ್ನೀರಿನ ಪ್ರದೇಶದಲ್ಲೂ ಪ್ರಿ ವೆಡ್ಡಿಂಗ್ ಶೂಟ್ ಹೆಚ್ಚಾಗಿದ್ದು, ಅಗತ್ಯ ಮುಂಜಾಗ್ರತೆಯೊಂದಿಗೆ ವಾಹನ ಸವಾರರಿಗೆ ಕಿರಿಕಿರಿಯಾಗದಂತೆ ಗಮನಹರಿಸಬೇಕಾಗಿದೆ.

ಸುರಕ್ಷಿತ ಪ್ರದೇಶದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಕೊಳ್ಳುವುದು ಉತ್ತಮ. ರಸ್ತೆಯಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆಸುವುದು, ಫೋಟೋ, ವಿಡಿಯೋ ತೆಗೆದುಕೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ ಕ್ರಮಕೈಗೊಳ್ಳಲಾಗುವುದು. | ಬಿ.ಎಲ್.ಶ್ರೀಹರಿಬಾಬು ಎಸ್ಟಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net